ಸನಾ ಪ್ರಾಂತದಲ್ಲಿ ಸೌದಿ ವೈಮಾನಿಕ ದಾಳಿಗೆ 22 ಮೃತ್ಯು: ಹೂತಿಗಳ ಹೇಳಿಕೆ

Photo Credit; newindianexpress.com
ಸನಾ, ನ.7: ಯಮನ್ ನ ಸನಾ ಪ್ರಾಂತದಲ್ಲಿ ಮನೆಗಳನ್ನು ಗುರಿಯಾಗಿಸಿ ಸೌದಿ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಜನರು ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಹೂತಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಅಲ್-ಶರಿಯಾ ಪ್ರದೇಶದಲ್ಲಿ ಈ ಸಾವುಗಳು ಸಂಭವಿಸಿವೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಟ್ಟಡದ ಭಗ್ನಾವಶೇಷಗಳ ಅಡಿಯಿಂದ ಜನರನ್ನು ಹೊರತೆಗೆಯುತ್ತಿದ್ದಾರೆ. ದಾಳಿಕೋರ ವಿಮಾನಗಳು ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯ ಮೇಲೆಯೂ ಎರಡು ಬಾರಿ ದಾಳಿ ನಡೆಸಿವೆ ಎಂದು ಹೂತಿಗಳ ಸ್ವಾಮ್ಯದ ‘ಸಬಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಶುಕ್ರವಾರ ನೈಋತ್ಯ ಯಮನ್ ನ ತೈಝ್ ಪ್ರಾಂತದ ಅಲ್-ವಾಜಿಯಾ ಮಾರುಕಟ್ಟೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಹೂತಿ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಆದರೆ, ಈ ದಾಳಿಗೆ ಹೂತಿಗಳೇ ಕಾರಣ ಎಂದು ತೈಝ್ ನಲ್ಲಿರುವ ಯಮನ್ ಸರಕಾರದೊಂದಿಗೆ ಸಂಯೋಜಿತ ಅಧಿಕಾರಿಗಳು ಆರೋಪಿಸಿದ್ದಾರೆ.




