60 ದೇಶಗಳ ಮೇಲೆ ಶೇ. 10ರಿಂದ ಶೇ.12.5ರಷ್ಟು ಸುಂಕ | ನ್ಯಾಯಾಲಯದ ಮೆಟ್ಟಿಲೇರಿದ 25 ಡೆಮಾಕ್ರಟಿಕ್ ರಾಜ್ಯಗಳು: ಟ್ರಂಪ್ಗೆ ಹೊಸ ಸವಾಲು

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಅಮೆರಿಕದ ಒಟ್ಟು ಆಮದಿನ ಶೇಕಡಾ 99.4 ರಷ್ಟು ಪಾಲು ಹೊಂದಿರುವ 60 ದೇಶಗಳ ಮೇಲೆ ಸುಂಕವನ್ನು ವಿಧಿಸುವ ನಿರ್ಧಾರವನ್ನು ವಿರೋಧಿಸಿ ಡೆಮಾಕ್ರಟಿಕ್ ಆಡಳಿತವಿರುವ 25 ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿದ್ದು,ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೊಸ ಆಂತರಿಕ ಸವಾಲು ಎದುರಾಗಿದೆ.
ಬಲವಂತದ ಕಾರ್ಮಿಕ ಪದ್ಧತಿಯ ಸಮಸ್ಯೆಯನ್ನು ತಡೆಯಲು ವಿಫಲವಾಗಿವೆ ಎಂದು ಆರೋಪಿಸಿ ಟ್ರಂಪ್ ಕಳೆದ ತಿಂಗಳು 60 ದೇಶಗಳ ಮೇಲೆ ಶೇ.10 ರಿಂದ ಶೇ.12.5 ರಷ್ಟು ಹೊಸ ಸುತ್ತಿನ ಸುಂಕಗಳನ್ನು ವಿಧಿಸಿದ್ದರು. ಈ ಹೊಸ ತೆರಿಗೆಯು ಜುಲೈ 24 ರಂದು ಅಂತ್ಯಗೊಂಡ ಶೇ.10ರಷ್ಟು ಜಾಗತಿಕ ಸುಂಕಗಳ ಬದಲಿಗೆ ಜಾರಿಗೆ ಬಂದಿದೆ.
ಹಲವು ದೇಶಗಳ ಮೇಲೆ ಮತ್ತೊಮ್ಮೆ ಸುಂಕ ವಿಧಿಸಿರುವ ಟ್ರಂಪ್ ಆಡಳಿತದ ವಿರುದ್ಧ ಈ 25 ರಾಜ್ಯಗಳು ಸೋಮವಾರ ಅಮೆರಿಕದ ಜಾಗತಿಕ ವ್ಯಾಪಾರ ನ್ಯಾಯಾಲಯದ ಮೆಟ್ಟಿಲೇರಿವೆ. ಈ ಸುಂಕಗಳು ದೇಶಾದ್ಯಂತ ಗ್ರಾಹಕರು ಮತ್ತು ಉದ್ಯಮಗಳ ವೆಚ್ಚವನ್ನು ಹೆಚ್ಚಿಸುತ್ತವೆ ಎಂದು ಅವು ಪ್ರತಿಪಾದಿಸಿವೆ.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್ ಮತ್ತು ಗವರ್ನರ್ ಕ್ಯಾಥಿ ಹೊಚುಲ್ ಅವರೊಂದಿಗೆ ಡೆಮಾಕ್ರಟಿಕ್ ರಾಜ್ಯಗಳ ಒಕ್ಕೂಟವೂ ಈ ಸುಂಕಗಳನ್ನು ಅಕ್ರಮ ಎಂದು ಘೋಷಿಸುವಂತೆ ಕೋರಿದೆ.
ಭಾರತವು 16 ಇತರ ದೇಶಗಳೊಂದಿಗೆ ಶೇ.10ರಷ್ಟು ಸುಂಕವನ್ನು ಎದುರಿಸುತ್ತಿದೆ. ಈ ಹಿಂದೆ ಅಮೆರಿಕವು ಭಾರತಕ್ಕೆ ಶೇ.12.5 ರಷ್ಟು ಸುಂಕ ದರವನ್ನು ಪ್ರಸ್ತಾವಿಸಿತ್ತು. ಆದರೆ,ಜೂನ್ 14ರಂದು ಭಾರತವು ಬಲವಂತದ ಕಾರ್ಮಿಕರಿಂದ ತಯಾರಿಸಿದ ಸರಕುಗಳ ಆಮದನ್ನು ನಿಷೇಧಿಸಲು ತನ್ನ ವಿದೇಶಿ ವ್ಯಾಪಾರ ನೀತಿಯನ್ನು ತಿದ್ದುಪಡಿ ಮಾಡಿದ ಬಳಿಕ ಈ ತೆರಿಗೆ ದರವನ್ನು ಕಡಿಮೆ ಮಾಡಲಾಯಿತು.
ಜಾಗತಿಕ ವ್ಯಾಪಾರದಲ್ಲಿ ಬಲವಂತದ ಕಾರ್ಮಿಕ ಪದ್ಧತಿಯನ್ನು ಎದುರಿಸಲು 1974ರ ವ್ಯಾಪಾರ ಕಾಯ್ದೆಯ ಕಲಂ 301ನ್ನು ಬಳಸುತ್ತಿರುವುದಾಗಿ ಟ್ರಂಪ್ ಆಡಳಿತವು ಪ್ರತಿಪಾದಿಸುತ್ತಿದೆ. ಆದರೆ, ಆಡಳಿತವು ಈ ಹಿಂದೆ ಪದೇ ಪದೇ ಜಾರಿಗೆ ತರಲು ಯತ್ನಿಸಿ ವಿಫಲವಾಗಿದ್ದ ವ್ಯಾಪಕ ಸುಂಕಗಳನ್ನೇ ಹೇರಲು ಇದನ್ನೊಂದು ನೆಪವಾಗಿ ಬಳಸಿಕೊಳ್ಳುತ್ತಿದೆ ಎಂದು ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದಾವೆಯಲ್ಲಿ ವಾದಿಸಲಾಗಿದೆ ಎಂದು ಜೇಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕಲಂ 301ರ ಅಗತ್ಯಗಳನ್ನು ಪಾಲಿಸದೆ ಮತ್ತು ಬಲವಂತದ ಕಾರ್ಮಿಕ ಪದ್ಧತಿಯನ್ನು ತಡೆಯುವ ತನ್ನ ಸ್ಪಷ್ಟ ಗುರಿಗೆ ಯಾವುದೇ ನೇರ ಸಂಬಂಧವಿಲ್ಲದೆ ಹೊಸ ಸುಂಕಗಳನ್ನು ಜಾರಿಗೊಳಿಸುವ ಮೂಲಕ ಆಡಳಿತವು ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಅಧ್ಯಕ್ಷರು ತನಗೆ ಬೇಕಾದ ದೇಶಗಳ ಮೇಲೆಲ್ಲ ಇಷ್ಟ ಬಂದಂತೆ ಸುಂಕ ವಿಧಿಸುವ ಅಧಿಕಾರ ಹೊಂದಿಲ್ಲ ಎನ್ನುವುದು ನಮ್ಮ ಕಾನೂನು ಮತ್ತು ಸಂವಿಧಾನದಲ್ಲಿ ಸ್ಪಷ್ಟವಾಗಿದೆ’ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್ ಹೇಳಿದ್ದಾರೆ.






