ಯಮನ್ ನಲ್ಲಿ ವೈಮಾನಿಕ ದಾಳಿ: 26 ಮಂದಿ ಮೃತ್ಯು

Screengrab : X
ಸನಾ, ನ. 24: ನೈಋತ್ಯ ಯಮನ್ ನ ಲಹ್ಜ್ ಪ್ರಾಂತದಲ್ಲಿ ಟ್ರಕ್ ಮತ್ತು ಬಸ್ ಗಳು ಸಂಚರಿಸುತ್ತಿದ್ದ ಪ್ರದೇಶದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ AFP ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ. ಈ ದಾಳಿಗೆ ಸಂಬಂಧಿಸಿದಂತೆ ಹೂತಿ ಬಂಡುಕೋರರು ಮತ್ತು ಸರಕಾರಿ ಪಡೆಗಳು ಪರಸ್ಪರ ದೂಷಿಸಿಕೊಂಡಿವೆ.
ಸರಕಾರದ ಮಧ್ಯಂತರ ರಾಜಧಾನಿಯಾದ ಏಡನ್ ಕಡೆಗೆ ಹೂತಿ ಬಂಡುಕೋರರು ಮುನ್ನುಗ್ಗುತ್ತಿರುವ ಲಹ್ಜ್ ಪ್ರಾಂತದಲ್ಲಿ, ಮೈತ್ರಿಕೂಟದ ಯುದ್ಧವಿಮಾನಗಳು ಹೂತಿಗಳಿಗೆ ಸೇರಿದ ಎರಡು ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಈ ಘಟನೆಯಲ್ಲಿ 12 ಹೂತಿ ಹೋರಾಟಗಾರರು ಮತ್ತು 14 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗೆ ಸೌದಿ ವಾಯುಪಡೆಯೇ ಕಾರಣ ಎಂದು ಹೂತಿ ಸೇನಾ ವಕ್ತಾರರು ಆರೋಪಿಸಿದ್ದು, ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ. ಆದರೆ, ಜನಸಾಮಾನ್ಯರ ಸಂಚಾರಕ್ಕೆ ಅತ್ಯಂತ ಪ್ರಮುಖವಾಗಿರುವ ರಸ್ತೆಯಲ್ಲಿ ಯಾವುದೇ ಸೇನಾ ಗುರುತುಗಳಿಲ್ಲದ ನಾಗರಿಕ ವಾಹನಗಳನ್ನು ಗುರಿಯಾಗಿಸಿ ಹೂತಿ ಬಂಡುಕೋರರ ಗುಂಪು ದಾಳಿ ನಡೆಸಿದೆ ಎಂದು ಸರಕಾರಿ ಪಡೆಗಳ ವಕ್ತಾರರು ಪ್ರತಿಪಾದಿಸಿದ್ದಾರೆ.




