3 ವಿಜ್ಞಾನಿಗಳಿಗೆ ರಸಾಯನ ಶಾಸ್ತ್ರದ ನೊಬೆಲ್

Photo Credit : timesofindia.indiatimes.com
ಸ್ಟಾಕ್ಹೋಮ್, ಅ. 8: 2025ರ ಸಾಲಿನ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ‘ಮೆಟಲ್-ಆರ್ಗಾನಿಕ್ ಫ್ರೇಮ್ವರ್ಕ್’ ಎಂಬ ಒಂದು ವರ್ಗದ ಪಾಲಿಮರ್ಗಳನ್ನು ಅಭಿವೃದ್ಧಿ ಮಾಡಿರುವುದಕ್ಕಾಗಿ ಅವರನ್ನು ಅತ್ಯುನ್ನತ ಜಾಗತಿಕ ಪ್ರಶಸ್ತಿ ಅರಸಿ ಬಂದಿದೆ.
ಜಪಾನ್ನ ಕ್ಯೋಟೊ ವಿಶ್ವವಿದ್ಯಾನಿಲಯದ ಸುಸುಮು ಕಿಟಗವ, ಆಸ್ಟ್ರೇಲಿಯದ ಮೆಲ್ಬರ್ನ್ ವಿಶ್ವವಿದ್ಯಾನಿಲಯದ ರಿಚರ್ಡ್ ರಾಬ್ಸನ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಉಮರ್ ಎಮ್. ಯಾಘಿ ಪ್ರಶಸ್ತಿ ಪಡೆದವರು.
ಈ ಮೂವರು 11 ಮಿಲಿಯ ಸ್ವೀಡಿಶ್ ಕ್ರಾನರ್ (ಸುಮಾರು 10.38 ಕೋಟಿ ರೂಪಾಯಿ) ಮೊತ್ತವನ್ನು ಸಮವಾಗಿ ಹಂಚಿಕೊಳ್ಳಲಿದ್ದಾರೆ.
ಮೆಟಲ್-ಆರ್ಗಾನಿಕ್ ಫ್ರೇಮ್ ವರ್ಕ್ ತಂತ್ರಜ್ಞಾನವನ್ನು ಮುಖ್ಯವಾಗಿ ಜಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಮುಂತಾದ ಅನಿಲಗಳ ಸಂಗ್ರಹಣೆಯಲ್ಲಿ ಬಳಸಲಾಗುತ್ತದೆ. ಅನಿಲ ಶುದ್ಧೀಕರಣ, ಅನಿಲ ಪ್ರತ್ಯೇಕಿಸುವುದು, ಜಲಮೂಲಗಳಲ್ಲಿನ ಮಾಲಿನ್ಯಕಾರಕಗಳ ನಿವಾರಣೆಯಲ್ಲಿಯೂ ಇದನ್ನು ಉಪಯೋಗಿಸಲಾಗುತ್ತದೆ. ಅದೂ ಅಲ್ಲದೆ ‘ಸೂಪರ್ ಕೆಪಾಸಿಟರ್’ಗಳಾಗಿಯೂ ಉಪಯೋಗಿಸಬಹುದಾಗಿದೆ.
ಈ ಮೂವರು ವಿಜ್ಞಾನಿಗಳು ಹೊಸ ಮಾದರಿಯ ಅಣು ವಾಸ್ತುಶಿಲ್ಪವೊಂದನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸಯನ್ಸಸ್ನ ಪತ್ರಿಕಾ ಪ್ರಕಟನೆಯೊಂದು ತಿಳಿಸಿದೆ.
‘‘ಅವರು ಸೃಷ್ಟಿಸಿದ ರಚನೆಗಳಲ್ಲಿ (ಮೆಟಲ್-ಆರ್ಗಾನಿಕ್ ಫ್ರೇಮ್ವರ್ಕ್ಸ್) ದೊಡ್ಡ ರಂಧ್ರಗಳಿವೆ. ಇವುಗಳ ಮೂಲಕ ಅಣುಗಳು ಒಳಗೆ ಮತ್ತು ಹೊರಗೆ ಹೋಗಬಹುದು. ಮರುಭೂಮಿಯ ಗಾಳಿಯಿಂದ ನೀರು ಉತ್ಪಾದಿಸಲು, ನೀರಿನಿಂದ ಮಾಲಿನ್ಯಕಾರಕಗಳನ್ನು ಹೊರತೆಗೆಯಲು, ಇಂಗಾಲದ ಡೈ ಆಕ್ಸೈಡನ್ನು ಹಿಡಿದಿಡಲು ಮತ್ತು ಜಲಜನಕವನ್ನು ಸಂಗ್ರಹಿಸಿಡಲು ಸಂಶೋಧಕರು ಇವುಗಳನ್ನು ಬಳಸಿದ್ದಾರೆ’’ ಎಂದು ಅದು ಹೇಳಿದೆ.
ಮೆಟಲ್-ಆರ್ಗಾನಿಕ್ ಫ್ರೇಮ್ ವರ್ಕ್ ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಈ ವಿಜ್ಞಾನಿಗಳು ರಸಾಯನ ವಿಜ್ಞಾನಿಗಳಿಗೆ ಅವರು ಎದುರಿಸುತ್ತಿದ್ದ ಕೆಲವೊಂದು ಸವಾಲುಗಳನ್ನು ಪರಿಹರಿಸುವ ಅವಕಾಶಗಳನ್ನು ಒದಗಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







