2025ರ ಜನವರಿಯಿಂದ ಜುಲೈವರೆಗೆ ಕ್ರೈಸ್ತರ ಮೇಲೆ 334 ಹಿಂಸಾಚಾರ ಘಟನೆಗಳು ನಡೆದಿದೆ : ವರದಿ

Photo: EFIRLC
2025ರಲ್ಲಿ ಕ್ರೈಸ್ತ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು 334 ಹಿಂಸಾಚಾರ ಘಟನೆಗಳು ನಡೆದಿದೆ : ವರದಿ
ಹೊಸದಿಲ್ಲಿ: 2025ರ ಜನವರಿ ಮತ್ತು ಜುಲೈ ನಡುವೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರೈಸ್ತ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು 334 ಹಿಂಸಾಚಾರ ಘಟನೆಗಳು ನಡೆದಿದೆ ಎಂದು ರಿಲಿಜಿಯಸ್ ಲಿಬರ್ಟಿ ಕಮಿಷನ್ ಆಫ್ ದಿ ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ (Religious Liberty Commission of the Evangelical Fellowship of India) ಬಿಡುಗಡೆ ಮಾಡಿರುವ ಹೊಸ ವರದಿಯು ತಿಳಿಸಿದೆ.
ಒಟ್ಟು ದಾಖಲಿತ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ 95 ಘಟನೆಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಛತ್ತೀಸ್ಗಢ 86 ಘಟನೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತದ ಈ ಎರಡೂ ರಾಜ್ಯಗಳು ಕ್ರೈಸ್ತ ವಿರೋಧಿ ಹಿಂಸಾಚಾರದ ಪ್ರಮುಖ ತಾಣಗಳಾಗಿ ಹೊರಹೊಮ್ಮಿವೆ ಎಂದು EFIRLC ವರದಿ ತಿಳಿಸಿದೆ.
ಸಂತ್ರಸ್ತರ ಮೇಲೆ ದೈಹಿಕ ದಾಳಿ ನಡೆಯುತ್ತಿರುವುದಲ್ಲದೆ ಮತಾಂತರ ವಿರೋಧಿ ಕಾನೂನುಗಳ ಅಡಿಯಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಈ ಕಾನೂನನ್ನು ವ್ಯಾಪಕವಾಗಿ ದುರುಪಯೋಗ ಪಡಿಸಲಾಗುತ್ತದೆ. ಈ ಎಲ್ಲಾ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಪ್ರಕರಣಗಳು ಬೆದರಿಕೆಗಳು, ಸುಳ್ಳು ಆರೋಪಗಳಾಗಿದೆ ಎಂದು ವರದಿಯು ತಿಳಿಸಿದೆ.
ಅತ್ಯಂತ ಗಂಭೀರ ಘಟನೆಗಳಲ್ಲಿ ಛತ್ತೀಸ್ಗಢದಲ್ಲಿ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಗಳಾದ ವನದಾ ಫ್ರಾನ್ಸಿಸ್ ಮತ್ತು ಪ್ರೀತಾ ಮೇರಿ ಅವರನ್ನು ಬಂಧಿಸಲಾಗಿದೆ. ಬಜರಂಗದಳ ಸದಸ್ಯರು ಅವರ ಮೇಲೆ ಬಲವಂತದ ಮತಾಂತರ ಆರೋಪಿಸಿದ ಬಳಿಕ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಎನ್ಐಎ ನ್ಯಾಯಾಲಯ ಇತ್ತೀಚೆಗೆ ಅವರಿಗೆ ಜಾಮೀನು ನೀಡಿತ್ತು.
ʼಸಮಾಧಿಯ ಹಕ್ಕುʼಗಳ ನಿರಾಕರಣೆಯನ್ನು ಒಳಗೊಂಡ 13 ಪ್ರಕರಣಗಳು ದಾಖಲಾಗಿದೆ. ಅವುಗಳಲ್ಲಿ 92% ಛತ್ತೀಸ್ಗಢದಲ್ಲಿ ಸಂಭವಿಸಿವೆ. ಖಾಸಗಿ ಜಮೀನಿನಲ್ಲಿ ಕೂಡ ಕ್ರೈಸ್ತ ಸಮುದಾಯದ ಜನರಿಗೆ ತಮ್ಮ ನಂಬಿಕೆಯಂತೆ ಅಂತ್ಯಕ್ರಿಯೆ ನಡೆಸದಂತೆ ನಿರ್ಬಂಧಿಸಲಾಗಿದೆ. ಕ್ರೈಸ್ತರ ಮೇಲಿನ ದಾಳಿಯ ಹೆಚ್ಚಿನ ಪ್ರಕರಣಗಳು ರವಿವಾರದ ಪ್ರಾರ್ಥನೆಯ ಸಮಯದಲ್ಲಿ ನಡೆದಿದೆ ಎಂದು ವರದಿಯು ತಿಳಿಸಿದೆ.
ಭಿಲಾಯಿಯಲ್ಲಿ ಪಾದ್ರಿಗಳನ್ನು ಬಂಧಿಸಿ ದುರ್ಗ್ ಜೈಲಿನಲ್ಲಿ ಲಾಠಿಗಳಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿರುವ ಬಗ್ಗೆ ವೈದ್ಯಕೀಯ ಪುರಾವೆಗಳಿದ್ದರೂ ಜೈಲು ಸಿಬ್ಬಂದಿ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಪಾದ್ರಿಗಳು ಇನ್ನೂ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.
ಉತ್ತರ ಪ್ರದೇಶ ಮತ್ತು ಛತ್ತೀಸ್ಗಢ, ಕ್ರೈಸ್ತ ಸಮುದಾಯದ ಜನರ ಮೇಲಿನ ದೈಹಿಕ ಹಿಂಸೆ ಮತ್ತು ಸಾಮಾಜಿಕ ಬಹಿಷ್ಕಾರ, ಸುಳ್ಳು ಆರೋಪಗಳ ಪ್ರಮುಖ ಹಾಟ್ ಸ್ಪಾಟ್ಗಳಾಗಿದೆ. ಆ ಬಳಿಕ ಮಧ್ಯಪ್ರದೇಶದಲ್ಲಿ 22 ಪ್ರಕರಣಗಳು, ಬಿಹಾರದಲ್ಲಿ 17 ಪ್ರಕರಣಗಳು, ಕರ್ನಾಟಕದಲ್ಲಿ 17 ಪ್ರಕರಣಗಳು, ರಾಜಸ್ಥಾನದಲ್ಲಿ 15 ಮತ್ತು ಹರ್ಯಾಣದಲ್ಲಿ 15 ಪ್ರಕರಣಗಳು ವರದಿಯಾಗಿದೆ.
334 ಘಟನೆಗಳು ಒಟ್ಟು ದಾಳಿಗಳ ಒಂದು ಭಾಗವನ್ನು ಮಾತ್ರ ಪ್ರತಿಬಿಂಬಿಸುತ್ತದೆ ಎಂದು ವರದಿಯು ತಿಳಿಸಿದೆ. ಪ್ರತೀಕಾರದ ಭಯ, ಸ್ಥಳೀಯ ಅಧಿಕಾರಿಗಳ ಬೆದರಿಕೆ ಮತ್ತು ದಾಖಲೆಗಳ ಕೊರತೆಯಿಂದಾಗಿ ಹಲವು ಪ್ರಕರಣಗಳನ್ನು ವರದಿ ಮಾಡಲಾಗಿಲ್ಲ. ಕಾನೂನು ವಿಧಾನಗಳು ಮತ್ತು ಸಾಮಾಜಿಕ ಒತ್ತಡ ಎರಡರ ಮೂಲಕ ಕ್ರೈಸ್ತ ಸಮುದಾಯದ ಧಾರ್ಮಿಕ ಅಭಿವ್ಯಕ್ತಿಯನ್ನು ನಿಗ್ರಹಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ ಎಂದು ವರದಿಯು ಎಚ್ಚರಿಸಿದೆ.
ಜನವರಿಯಲ್ಲಿ, ʼಯುನೈಟೆಡ್ ಕ್ರಿಶ್ಚಿಯನ್ ಫೋರಮ್ʼ 2024ರಲ್ಲಿ ಕ್ರೈಸ್ತ ಸಮುದಾಯದ ಮೇಲೆ 834 ದಾಳಿಗಳು ನಡೆದಿದೆ ಎಂದು ತಿಳಿಸಿದೆ. ಇದು 2023ಕ್ಕಿಂತ 100 ಪ್ರಕರಣ ಹೆಚ್ಚಳವಾಗಿದೆ.
ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ 2025ರ ಮಾರ್ಚ್ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲಿನ ದಾಳಿಗಳಿಗಾಗಿ ಭಾರತವನ್ನು "ವಿಶೇಷ ಕಾಳಜಿ ವಹಿಸಬೇಕಾದ ದೇಶ" ಎಂದು ಹೇಳಿದೆ.
ಉತ್ತರ ಭಾರತ ಮತ್ತು ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿಯ ರಾಜ್ಯ ಘಟಕಗಳು ಮತಾಂತರ ವಿರೋಧಿ ಅಭಿಯಾನಗಳನ್ನು ನಡೆಸುತ್ತಿವೆ. ಆದರೆ, ಕೇರಳದಲ್ಲಿ ಪಕ್ಷದ ನಾಯಕರು ಮುಂಬರುವ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ಕ್ರೈಸ್ತ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನವನ್ನು ನಡೆಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಇಬ್ಬರು ಸನ್ಯಾಸಿನಿಯರನ್ನು ಭೇಟಿ ಮಾಡಿದ್ದರು. 2023ರ ಮಣಿಪುರ ಹಿಂಸಾಚಾರದ ವೇಳೆ 300ಕ್ಕೂ ಹೆಚ್ಚು ಚರ್ಚ್ಗಳನ್ನು ಧ್ವಂಸ ಪಡಿಸಲಾಗಿದೆ ಎಂಬುದು ಗಮನಾರ್ಹವಾಗಿದೆ.







