ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತದ ಪ್ರಯತ್ನಕ್ಕೆ V4 ರಾಷ್ಟ್ರಗಳ ಬೆಂಬಲ

Photo credit : indiatoday
ಹೊಸದಿಲ್ಲಿ / ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಖಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ವಿಸೆಗ್ರಾಡ್ ಫೋರ್ ದೇಶಗಳಿಂದ ಹೊಸ ಬೆಂಬಲ ದೊರೆತಿದೆ. ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದೇಶಗಳು ಭಾರತದ ಈ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ವಿಸೆಗ್ರಾಡ್ ಫೋರ್ ಒಕ್ಕೂಟದಲ್ಲಿ ಹಂಗೇರಿ, ಪೋಲೆಂಡ್, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯ ದೇಶಗಳು ಸೇರಿವೆ.
ವಿಸೆಗ್ರಾಡ್ ಗ್ರೂಪ್ ನ ನಾಲ್ಕು ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ನಡೆದ ಮೊದಲ ‘V4-ಭಾರತ’ ಸಭೆಯಲ್ಲಿ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದವು.
ಈ ಸಭೆಯ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕಾಗಿ ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಮಧ್ಯ ಯುರೋಪಿನ ನಾಲ್ಕು ರಾಷ್ಟ್ರಗಳಿಂದ ಸಾಮೂಹಿಕ ಬೆಂಬಲ ದೊರೆತಿದೆ. ಇದು ದಶಕಗಳಿಂದ ಬಾಕಿ ಉಳಿದಿರುವ ಜಾಗತಿಕ ಸಂಸ್ಥೆಯ ಸುಧಾರಣೆಯ ಬೇಡಿಕೆಗೆ ಹೊಸ ರಾಜತಾಂತ್ರಿಕ ಬಲ ನೀಡಿದೆ ಎಂದು ಹೇಳಲಾಗುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗಿನ ಭೇಟಿಯ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಸ್ಲೋವಾಕಿಯಾದ ವಿದೇಶಾಂಗ ಸಚಿವ ಜುರಾಜ್ ಬ್ಲಾನಾರ್, “ಗ್ಲೋಬಲ್ ಸೌತ್ ನ ಭಾಗವಾಗಿರುವ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಉದಯೋನ್ಮುಖ ಸೂಪರ್ ಪವರ್ ಆಗಿರುವ ಭಾರತವು ಯುಎನ್ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಬೇಕು ಎಂಬುದನ್ನು ನಾವೆಲ್ಲರೂ V4 ದೇಶಗಳು ಒಪ್ಪಿಕೊಳ್ಳುತ್ತೇವೆ” ಎಂದು ಹೇಳಿದರು.
ಭಾರತವು ಈವರೆಗೆ ಎಂಟು ಬಾರಿ ಭದ್ರತಾ ಮಂಡಳಿಯ ಚುನಾಯಿತ (ತಾತ್ಕಾಲಿಕ) ಸದಸ್ಯನಾಗಿ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ 2021 ಮತ್ತು 2022ರಲ್ಲಿ ಸೇವೆ ಸಲ್ಲಿಸಿತ್ತು.
ಭಾರತದ ವಾದವೇನು ? :
ಭದ್ರತಾ ಮಂಡಳಿ ರಚನೆಯಾದ ನಂತರ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ಆದರೆ ಅದರ ಖಾಯಂ ಸದಸ್ಯತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 1945ರಲ್ಲಿ ಏಷ್ಯಾ ಮತ್ತು ಆಫ್ರಿಕಾದ ಬಹುತೇಕ ಭಾಗಗಳು ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಿದ್ದವು. ಇಂದು ಬೃಹತ್ ಜನಸಂಖ್ಯೆ, ಬಲಿಷ್ಠ ಆರ್ಥಿಕತೆ ಮತ್ತು ರಾಜತಾಂತ್ರಿಕ ಪ್ರಭಾವ ಹೊಂದಿರುವ ಅನೇಕ ದೇಶಗಳು ಅಂದು ಸ್ವತಂತ್ರವಾಗಿರಲಿಲ್ಲ ಅಥವಾ ಅಸ್ತಿತ್ವದಲ್ಲೇ ಇರಲಿಲ್ಲ. ಬದಲಾಗಿರುವ ಜಾಗತಿಕ ವಾಸ್ತವಿಕತೆಗೆ ಅನುಗುಣವಾಗಿ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದಲ್ಲಿಯೂ ಬದಲಾವಣೆಗಳಾಗಬೇಕು ಎಂಬುದು ಭಾರತದ ವಾದ.
ಭಾರತದ ಹಕ್ಕೊತ್ತಾಯವು ಅದರ ಅಗಾಧ ಜನಸಂಖ್ಯೆ, ಆರ್ಥಿಕ ಸಾಮರ್ಥ್ಯ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ನೀಡಿರುವ ಕೊಡುಗೆ ಮತ್ತು ಬೆಳೆಯುತ್ತಿರುವ ರಾಜತಾಂತ್ರಿಕ ಪ್ರಭಾವವನ್ನು ಆಧರಿಸಿದೆ. ಭಯೋತ್ಪಾದನೆ ನಿಗ್ರಹ, ಅಭಿವೃದ್ಧಿ, ಕಡಲ ಭದ್ರತೆ ಮತ್ತು ಅಂತರರಾಷ್ಟ್ರೀಯ ಶಾಂತಿ ಕುರಿತ ಚರ್ಚೆಗಳಲ್ಲಿ ಭಾರತ ಸಕ್ರಿಯ ಪಾತ್ರ ವಹಿಸುತ್ತಿದೆ.






