Ukraine | ಒಡೆಸಾ ಬಂದರಿನಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಮೃತ್ಯು; ಮತ್ತೊಬ್ಬರ ಸ್ಥಿತಿ ಗಂಭೀರ

Photo Credit : ndtv
ಹೊಸದಿಲ್ಲಿ: ಉಕ್ರೇನ್ ನ ಒಡೆಸಾ ಬಂದರಿನಿಂದ ಜುಲೈ 19ರ ಸಂಜೆ ಹೊರಟಿದ್ದ ಎಂವಿ ಗೋಲ್ಡನ್ ಲಿಯೋ (MV Golden Leo) ವಾಣಿಜ್ಯ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬ ಭಾರತೀಯ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ದಾಳಿಯ ಸಂದರ್ಭದಲ್ಲಿ ಹಡಗಿನಲ್ಲಿ ಐವರು ಭಾರತೀಯರು ಸೇರಿದಂತೆ ಒಟ್ಟು 17 ಸಿಬ್ಬಂದಿ ಇದ್ದರು. ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವಾಲಯ ಹೇಳಿದೆ. ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸಚಿವಾಲಯ, ಗಾಯಗೊಂಡ ಸಿಬ್ಬಂದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು, ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ಸಮುದ್ರ ಸಂಚಾರ ಮತ್ತು ವ್ಯಾಪಾರದ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಅತ್ಯಂತ ದುಃಖಕರ ಸಂಗತಿಯಾಗಿದ್ದು, ಇಂತಹ ಕೃತ್ಯಗಳನ್ನು ತಪ್ಪಿಸಬೇಕು ಎಂದು ಭಾರತ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ಉಕ್ರೇನಿನ ಅಧಿಕಾರಿಗಳ ಪ್ರಕಾರ, ರಷ್ಯಾ ಉಡಾಯಿಸಿದ ಮೂರು ಕ್ರೂಸ್ ಕ್ಷಿಪಣಿಗಳು ಹಡಗಿಗೆ ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡಿದೆ. ಕಪ್ಪು ಸಮುದ್ರದಲ್ಲಿ ವಾರಗಳಿಂದ ನಡೆಯುತ್ತಿರುವ ಸಂಘರ್ಷದ ನಡುವೆ ಸಂಭವಿಸಿದ ಅತ್ಯಂತ ಮಾರಕ ದಾಳಿಗಳಲ್ಲಿ ಇದೂ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
ಉಕ್ರೇನಿನ ನೌಕಾಪಡೆಯ ಮಾಹಿತಿ ಪ್ರಕಾರ, ಗಿನಿಯಾ-ಬಿಸ್ಸೌ ಧ್ವಜ ಹೊಂದಿದ್ದ ಮಾಡಿದ್ದ ಗೋಲ್ಡನ್ ಲಿಯೋ ಹಡಗು ಜೋಳವನ್ನು ಸಾಗಿಸುತ್ತಿತ್ತು. ಹಡಗನ್ನು ಭಾರತೀಯ ಹಾಗೂ ಸಿರಿಯಾದ ಸಿಬ್ಬಂದಿ ನಿರ್ವಹಿಸುತ್ತಿದ್ದರು. ಕ್ಷಿಪಣಿ ದಾಳಿಯ ಬಳಿಕ ರಾತ್ರಿಯಿಡೀ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಈ ದಾಳಿಯಲ್ಲಿ ಒಬ್ಬ ಮರೀನ್ ಪೈಲಟ್ ಸೇರಿದಂತೆ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ 17 ಸಿಬ್ಬಂದಿಗಳ ಪೈಕಿ ಎಂಟು ಮಂದಿಯನ್ನು ರಕ್ಷಿಸಲಾಗಿದೆ ಎಂದು ಉಕ್ರೇನಿನ ಬಂದರು ಪ್ರಾಧಿಕಾರ ತಿಳಿಸಿದೆ.
LSEG ದತ್ತಾಂಶದ ಪ್ರಕಾರ, ಗೋಲ್ಡನ್ ಲಿಯೋ ಹಡಗು ಮುಂಬೈ ಮೂಲದ Ocean Grace Shipping Limited ಒಡೆತನದಲ್ಲಿದೆ.
ಒಡೆಸಾ ಪ್ರದೇಶದ ಗವರ್ನರ್ ಅವರ ಪ್ರಕಾರ, ಈ ತಿಂಗಳಲ್ಲಿ ಮಾತ್ರ ರಷ್ಯಾದ ದಾಳಿಗಳಿಂದ ಆ ಪ್ರದೇಶದಲ್ಲಿ 28 ಮಂದಿ ಮೃತಪಟ್ಟಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ಸೋಮವಾರ ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಬಸ್ ಮೇಲೆ ಉಕ್ರೇನಿನ ಡ್ರೋನ್ ದಾಳಿ ನಡೆದಿದ್ದು, ಒಂದು ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಹಲವು ಉಕ್ರೇನಿನ ನಗರಗಳ ಮೇಲೆ ರಷ್ಯಾ ನಡೆಸಿದ ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಇತ್ತೀಚಿನ ವಾರಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಿವೆ.






