ತಪ್ಪಾಗಿ ಜೈಲುಶಿಕ್ಷೆಗೆ ಒಳಗಾಗಿದ್ದ 3 ಮಂದಿಗೆ 48 ದಶಲಕ್ಷ ಡಾಲರ್ ಪರಿಹಾರ!

Photo: exonerate.org
ವಾಷಿಂಗ್ಟನ್: ಅಪ್ರಾಪ್ತ ವಯಸ್ಸಿನ ಯುವಕರಾಗಿ ಕೊಲೆ ಪ್ರಕರಣದಲ್ಲಿ ಷಾಮೀಲಾದ ಸುಳ್ಳು ಆರೋಪದಲ್ಲಿ ಜೈಲು ಸೇರಿದ್ದ ಮೂವರು ಕೈದಿಗಳು 36 ವರ್ಷ ಜೈಲುವಾಸ ಅನುಭವಿಸಿದ ಬಳಿಕ ಅಮಾಯಕರು ಎನ್ನುವುದು ಸಾಬೀತಾಗಿದ್ದು 48 ದಶಲಕ್ಷ ಡಾಲರ್ ಪರಿಹಾರ ಮೊತ್ತವನ್ನು ಪಡೆದಿದ್ದಾರೆ.
ಅಲ್ಫ್ರೆಡ್ ಚೆಸ್ಟ್ ನಟ್, ರಾನ್ಸಮ್ ವಟ್ಕಿನ್ಸ್ ಮತ್ತು ಆ್ಯಂಡ್ರೂ ಸ್ಟಿವರ್ಟ್ ಅವರನ್ನು 1983ರ ಥ್ಯಾಂಕ್ಸ್ ಗಿವಿಂಗ್ ದಿನದಂದು ಡೆವಿಟ್ ಡ್ಯುಕೆಟ್ ಎಂಬ 14 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಮೊದಲ ದರ್ಜೆ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. 36 ವರ್ಷ ಬಳಿಕ ಇದೀಗ ಅವರನ್ನು ನಿರ್ದೋಷಿಗಳೆಂದು ಘೋಷಿಸಲಾಗಿದೆ.
"ಈ ಮೂವರು ಹದಿಹರೆಯದವರಾಗಿದ್ದಾಗ ಜೈಲುಪಾಲಾಗಿದ್ದು, 50ರ ಸನಿಹದಲ್ಲಿರುವ ಅವರು ಇದೀಗ ಯುವ ಅಜ್ಜಂದಿರಾಗಿ ಹೊರಬಂದಿದ್ದಾರೆ" ಎಂದು ಬಾಲ್ಟಿಮೋರ್ ಪೊಲೀಸ್ ಇಲಾಖೆಯ ಮುಖ್ಯ ಕಾನೂನು ಅಭಿಯೋಜಕ ಜಸ್ಟಿನ್ ಕಾನ್ರಾಯ್ ಹೇಳಿದ್ದಾರೆ. ಈ ಆಧಾರದಲ್ಲಿ ನಗರದ ಬೋರ್ಡ್ ಆಫ್ ಎಸ್ಟಿಮೇಟ್ಸ್, ಇವರ ಪರಿಹಾರ ಪಾವತಿಯನ್ನು ಅನುಮೋದಿಸಿದೆ.
ಈ ಮೂವರು ಇದಕ್ಕೂ ಮುನ್ನ 2020ರಲ್ಲಿ ಪರಿಹಾರ ಯೋಜನೆಯಡಿ 2.9 ದಶಲಕ್ಷ ಡಾಲರ್ ಪರಿಹಾರ ಪಡೆದಿದ್ದರು. ಅಲ್ಫ್ರೆಡ್ ಚೆಸ್ಟ್ ನಟ್ ಸಾರ್ವಜನಿಕ ದಾಖಲೆ ಮನವಿಯನ್ನು ಸಲ್ಲಿಸಿದ ಬಳಿಕ ಈ ಮೂವರನ್ನು ಅಮಾಯಕರು ಎಂದು ಘೋಷಿಸಲಾಗಿದೆ. ವಿಚಾರಣೆ ವೇಳೆ ತಮ್ಮ ವಕೀಲರ ಬಳಿ ಇದ್ದ ಹೊಸ ಪುರಾವೆಗಳನ್ನು ಶೋಧಿಸಿದ್ದ ಇವರು ಬಲ್ಟಿಮೋರ್ ನ ಕನ್ವಿಕ್ಷನ್ ಇಂಟಗ್ರಿಟಿ ಯುನಿಟ್ ನ ಮೊರೆ ಹೋಗಿದ್ದರು.
ಕೊಲೆ ಆರೋಪಿಗಳೆಂದು ನಿರ್ಧಾರಕ್ಕೆ ಬರುವಲ್ಲಿ ತನಿಖಾಧಿಕಾರಿಗಳು ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಮತ್ತು ಭೌತಿಕ ಪುರಾವೆಗಳನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಗಳು ತಮ್ಮ ದಾವೆಯಲ್ಲಿ ವಾದ ಮಂಡಿಸಿದ್ದರು. ಸುಳ್ಳು ಪುರಾವೆಗಳ ಆಧಾರದಲ್ಲಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗಿತ್ತು ಎಂಬ ವಾದವನ್ನು ಎತ್ತಿಹಿಡಿದ ನ್ಯಾಯಾಲಯ ಇವರನ್ನು ದೋಷಮುಕ್ತಗೊಳಿಸಿದೆ.







