ಭಾರತಕ್ಕೆ ಶೇ.500 ಸುಂಕಾಸ್ತ್ರ?: ರಶ್ಯ ನಿರ್ಬಂಧಗಳ ಮಸೂದೆಗೆ ಟ್ರಂಪ್ ಹಸಿರುನಿಶಾನೆ !

ಡೊನಾಲ್ಡ್ ಟ್ರಂಪ್ (File Photo: PTI)
ಹೊಸದಿಲ್ಲಿ,ಜ.8: ರಶ್ಯದಿಂದ ತೈಲ ಖರೀದಿಗಾಗಿ ಭಾರತಕ್ಕೆ ಈಗಾಗಲೇ ಶೇ.50ರ ಸುಂಕಾಸ್ತ್ರವನ್ನು ಪ್ರಯೋಗಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇದೀಗ ಆ ಸುಂಕವನ್ನು ಶೇ.500ರವರೆಗೆ ಏರಿಕೆ ಮಾಡಲು ಅವಕಾಶ ನೀಡುವ ಮಸೂದೆಗೆ ಹಸಿರು ನಿಶಾನೆ ತೋರಿಸಿದ್ದಾರೆಂದು ವರದಿಯಾಗಿದೆ.
ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹಾಗೂ ಡೆಮಾಕ್ರಾಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ರಚಿಸಿರುವ ‘ರಶ್ಯ ನಿರ್ಬಂಧಗಳ ಮಸೂದೆ’ಯು ಭಾರತ, ಚೀನಾ ಹಾಗೂ ಬ್ರೆಝಿಲ್ ಸೇರಿದಂತೆ ರಶ್ಯ ಜೊತೆ ವ್ಯಾಪಾರದ ಸಂಬಂಧವನ್ನು ಹೊಂದಿರುವ ರಾಷ್ಟ್ರಗಳಿಗೆ ದಂಡವನ್ನು ವಿಧಿಸಲು ಬಳಸಲಾಗುತ್ತದೆ.
ಈ ಮಸೂದೆಯು ಸೆನೆಟ್ಲ್ಲಿ ಅಂಗೀಕಾರಗೊಂಡಲ್ಲಿ ರಶ್ಯನ್ ತೈಲ ಅಥವಾ ಯುರೇನಿಯಂ ಖರೀದಿಸುವ ದೇಶಗಳಿಗೆ 500 ಶೇಕಡದವರೆಗೆ ಸುಂಕವನ್ನು ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅನುಮತಿ ನೀಡುತ್ತದೆ.
ಉಕ್ರೇನ್ ಮೇಲೆ ರಶ್ಯದ ಆಕ್ರಮಣವನ್ನು ಕೊನೆಗೊಳಿಸುವುದಕ್ಕಾಗಿ ರಶ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಉದ್ದೇಶದಿಂದ ಆ ದೇಶದ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುತ್ತಿರುವುದಕ್ಕಾಗಿ ಟ್ರಂಪ್ ಆಡಳಿತ ಹೇಳಿಕೊಳ್ಳುತ್ತಿದೆ.
ಮಸೂದೆಯನ್ನು ಸಿದ್ಧಪಡಿಸಿರುವ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಈ ಬಗ್ಗೆ ಹೇಳಿಕೆಯಯೊಂದನ್ನು ನೀಡಿದ್ದು ‘‘ಅಧ್ಯಕ್ಷ ಟ್ರಂಪ್ ಅವರ ಜೊತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ನಡೆಸಿದ ಅತ್ಯಂತ ಫಲಪ್ರದ ಮಾತುಕತೆಯ ಬಳಿಕ ಅವರು ದ್ವಿಪಕ್ಷೀಯ ರಶ್ಯ ನಿರ್ಬಂಧಗಳ ಮಸೂದೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮಸೂದೆಯನ್ನು ರಚಿಸಲು ತಾನು ಸೆನೆಟರ್ ರಿಚರ್ಡ್ ಬ್ಲೂಮೆಂಥಲ್ ಜೊತೆ ಹಲವುತಿಂಗಳುಗಳಿಂದ ಶ್ರಮಿಸಿರುವೆ’’ ಎಂದು ತಿಳಿಸಿದ್ದಾರೆ.
ಮುಂದಿನ ವಾರ ಮಸೂದೆಯನ್ನು ಸೆನೆಟ್ನಲ್ಲಿ ಮಂಡಿಸಲಿದ್ದು,ಅದು ಅಂಗೀಕಾರಗೊಳ್ಳುವುದೆಂಬ ಭರವಸೆಯಿದೆ’’ ಎಂದು ಹೇಳಿದ್ದಾರೆ.
ಇದು ಸಕಾಲಿಕವಾದ ಮಸೂದೆಯಾಗಿದೆ. ಉಕ್ರೇನ್ ಶಾಂತಿಗಾಗಿ ರಿಯಾಯಿತಿಗಳನ್ನು ನೀಡುತ್ತಿದೆ. ಪುಟಿನ್ ಬರೀ ಮಾತುಗಳಲ್ಲೇ ಮಗ್ನರಾಗಿದ್ದಾರೆ ಅಮಾಯಕರನ್ನು ಹತ್ಯೆಗೈಯುವುದನ್ನು ಮುಂದುವರಿಸಿದ್ದಾರೆ . ರಶ್ಯದಿಂದ ಅಗ್ಗದ ತೈಲವನ್ನು ಖರೀದಿಸುವ ಮೂಲಕ ಪುಟಿನ್ ಅವರ ಯುದ್ಧಯಂತ್ರಕ್ಕೆ ಇಂಧನ ನೀಡುಂತಹ ದೇಶಗಳನ್ನು ದಂಡಿಸಲು ಈ ಮಸೂದೆಯು ಟ್ರಂಪ್ ಅವರಿಗೆ ಅವಕಾಶ ನೀಡುತ್ತದೆ ಎಂದವರು ಹೇಳಿದ್ದಾರೆ.
ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಶ್ಯ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಯನ್ನು ಅಂತಿಮಗೊಳಿಸಲು ಯತ್ನಿಸುತ್ತಿದೆ. ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹಾಗೂ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ವ್ನ್ ಅವರು ಈ ನಿಯೋಗದಲ್ಲಿರುವ ಪ್ರಧಾನ ಸಂಧಾನಕಾರರಾಗಿದ್ದಾರೆ.
ಬುಧವಾರ ನಿಯೋಗವು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಯುದ್ಧವನ್ನು ಅಂತ್ಯಗೊಳಿಸುವ ರಾಜತಾಂತ್ರಿಕ ವಿಧಾನಗಳ ಕುರಿತು ಚರ್ಚಿಸಿದ್ದರು.
ರಶ್ಯದಿಂದ ತೈಲ ಖರೀದಿಸುತ್ತಿರುವುದಕ್ಕೆ ಭಾರತದ ಉತ್ಪನ್ನಗಳಿಗೆ ಟ್ರಂಪ್ ಅವರು ಶೇ.50ರಷ್ಟು ಆಮದು ಸುಂಕವನ್ನು ವಿಧಿಸಿದೆ.







