ಪಾಕಿಸ್ತಾನದಲ್ಲಿ 5.2 ತೀವ್ರತೆಯ ಭೂಕಂಪ

ಸಾಂದರ್ಭಿಕ ಚಿತ್ರ (PTI)
ಇಸ್ಲಾಮಾಬಾದ್: ಭಾನುವಾರ ಮುಂಜಾನೆ 3.54ರ ಸುಮಾರಿಗೆ ಪಾಕಿಸ್ತಾನದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ. ತಕ್ಷಣಕ್ಕೆ ಯಾವುದೇ ಆಸ್ತಿ ಪಾಸ್ತಿ ನಷ್ಟ ಅಥವಾ ಜೀವಹಾನಿಯ ವರದಿಗಳು ಬಂದಿಲ್ಲ.
ಸುಮಾರು 150 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದ್ದು, 30.25 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 69.82 ಡಿಗ್ರಿ ಪೂರ್ವ ರೇಖಾಂಶದಲ್ಲಿ ಇದರ ಕೇಂದ್ರಬಿಂದು ಇತ್ತು.
ರಾಷ್ಟ್ರೀಯ ಭೂಕಂಪ ಮಾಪನ ಸಂಸ್ಥೆ ಎಕ್ಸ್ ಪೋಸ್ಟ್ನಲ್ಲಿ ಇದನ್ನು ದೃಢಪಡಿಸಿದೆ. ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ; ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಇಂಡಿಯನ್ ಮತ್ತು ಯೂರೇಷಿಯನ್ ಟೆಕ್ಟಾನಿಕ್ ಪ್ಲೇಟ್ಗಳ ಸಂಘರ್ಷ ಪ್ರದೇಶದಲ್ಲಿ ಬರುವ ಪಾಕಿಸ್ತಾನ ಜಗತ್ತಿನಲ್ಲೇ ಅತಿಹೆಚ್ಚು ಭೂಕಂಪಕ್ಕೆ ತುತ್ತಾಗುವ ಪ್ರದೇಶಗಳಲ್ಲೊಂದಾಗಿದೆ. ಬಲೂಚಿಸ್ತಾನ, ಗಿಲ್ಗಿಟ್-ಬಲ್ಟಿಸ್ತಾನ ಮತ್ತು ಖೈಬರ್ ಪಕುಂಟ್ವ ಪ್ರದೇಶಗಳಲ್ಲಿ ಭೂಕಂಪ ಸಾಧ್ಯತೆ ಅತ್ಯಧಿಕ.
ಈ ಕಂಪನದಿಂದ ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲವಾದರೂ, ಈ ಭಾಗದ ಭೂಕಂಪ ಅಪಾಯ ಸಾಧ್ಯತೆಯ ಎಚ್ಚರಿಕೆ ಸಂದೇಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.





