ಸುಂಕ ಹೆಚ್ಚಳ | ಟ್ರಂಪ್ ನಿಲುವಿಗೆ 56% ಅಮೆರಿಕನ್ನರ ಬೆಂಬಲ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್ : ಆಮದು ಸರಕುಗಳ ಮೇಲಿನ, ವಿಶೇಷವಾಗಿ ಚೀನಾದಿಂದ, ಸುಂಕವನ್ನು ಹೆಚ್ಚಿಸುವ ಬಗ್ಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಯಾನವನ್ನು ಅಮೆರಿಕದ 56% ಮತದಾರರು ಬೆಂಬಲಿಸಿದ್ದಾರೆ ಎಂದು ರಾಯ್ಟರ್ಸ್, ಇಪ್ಸೋಸ್ ನಡೆಸಿದ ಸಮೀಕ್ಷೆ ತಿಳಿಸಿದೆ.
ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಡುವೆ ನಿಕಟ ಸ್ಪರ್ಧೆ ಇರುವುದಾಗಿ ಸಮೀಕ್ಷೆಗಳು ಉಲ್ಲೇಖಿಸಿವೆ. ಇಬ್ಬರೂ ಗೆದ್ದರೆ ತೆರಿಗೆ ಕಡಿತ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಟ್ರಂಪ್ ಘೋಷಿಸಿರುವ ಆಮದು ಸರಕುಗಳ ಮೇಲಿನ ಸುಂಕ ಹೆಚ್ಚಳ ಕ್ರಮವು ಈಗ 35 ಲಕ್ಷ ಕೋಟಿಯಷ್ಟು ಇರುವ ರಾಷ್ಟ್ರೀಯ ಸಾಲದ ಹೊರೆಯನ್ನು ತುಸು ತಗ್ಗಿಸಲಿದೆ ಎಂಬ ವಿಶ್ವಾಸ ಮತದಾರರಲ್ಲಿದೆ. ಆದರೆ ಟ್ರಂಪ್ ಅವರ ಪ್ರಸ್ತಾಪ ವಿರುದ್ಧ ಪರಿಣಾಮಗಳನ್ನು ಬೀರಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಸೆಪ್ಟಂಬರ್ 12ರಂದು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ 56% ನೋಂದಾಯಿತ ಮತದಾರರು ಆಮದು ಸರಕುಗಳ ಮೇಲೆ ಹೊಸ 10% ಸುಂಕ ಹೇರುವ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದಿದ್ದಾರೆ. ಆದರೆ 41% ಮತದಾರರು ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಕಮಲಾ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ 5% ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿದೆ.





