ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಭೂಕಂಪನ: ಆರು ಮಂದಿ ಮೃತ್ಯು, ಹಲವರಿಗೆ ಗಾಯ

Screengrab:X/@ani
ಢಾಕಾ: ಶುಕ್ರವಾರ ಬೆಳಗ್ಗೆ ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಶ್ಚಿಮ ಬಂಗಾಳದಾದ್ಯಂತ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳಲ್ಲೂ ಕಂಪನದ ಅನುಭವವಾಗಿದ್ದು, ಇದರಿಂದ ಗಾಬರಿಗೊಂಡ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೋಡಿ ಬಂದರು ಎಂದು ವರದಿಯಾಗಿದೆ.
ಸ್ಥಳೀಯ ಕಾಲಮಾನ 10.38ಕ್ಕೆ ಈ ಭೂಕಂಪನ ಸಂಭವಿಸಿದ್ದು, ಈ ಭೂಕಂಪನದ ಕೇಂದ್ರವು ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 25 ಕಿಮೀ ದೂರವಿರುವ ನರ್ಸಿಂಗ್ಡಿ ಜಿಲ್ಲೆಯ ಘೋರಾಶಾಲ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಈ ಭೂಕಂಪನ ಸುಮಾರು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ವರದಿ ಮಾಡಿದೆ.
ಈ ಭೂಕಂಪನದಲ್ಲಿ ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ವರದಿಗಳು ದೃಢಪಡಿಸಿವೆ. ಆದರೆ, ರಾಜಧಾನಿ ಢಾಕಾದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಢಾಕಾ ಮೂಲದ ಡಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪೈಕಿ ಮೂವರು ಕಟ್ಟಡವೊಂದರ ಚಾವಣಿ ಮತ್ತು ಗೋಡೆ ಕುಸಿದು ಬಿದ್ದಿದ್ದರಿಂದ ಮೃತಪಟ್ಟಿದ್ದರೆ, ಮೂವರು ಪಾದಚಾರಿಗಳು ತಡೆಗೋಡೆ ಕುಸಿದು ಬಿದ್ದಿದ್ದರಿಂದ, ಅದರಡಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಕಂಪನದ ತೀವ್ರತೆಗೆ ಢಾಕಾದಲ್ಲಿ ಕಟ್ಟಡಗಳು ಅಲುಗಾಡಿವೆ. ಇದರಿಂದ ಭಯಭೀತರಾದ ನಿವಾಸಿಗಳು ತಮ್ಮ ಮನೆಗಳು, ಕಚೇರಿಗಳು ಹಾಗೂ ಗಗನಚುಂಬಿ ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ ಎಂದು ವರದಿಯಾಗಿದೆ.







