6 ದಶಲಕ್ಷ ಸೊಮಾಲಿಯನ್ನರಿಗೆ ತುರ್ತು ನೆರವಿನ ಅಗತ್ಯವಿದೆ: ವಿಶ್ವಸಂಸ್ಥೆ

PC : NDTV
ವಿಶ್ವಸಂಸ್ಥೆ: ಸೊಮಾಲಿಯಾದಲ್ಲಿ ಸುಮಾರು 6 ದಶಲಕ್ಷ ಜನತೆ, ಅಂದರೆ ದೇಶದ ಜನಸಂಖ್ಯೆಯ ಮೂರನೇ ಒಂದರಷ್ಟು ಜನರಿಗೆ ಈ ವರ್ಷ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.
ಈ ವರ್ಷ ಸುಡಾನ್ಗೆ ನೆರವು ಕಾರ್ಯಕ್ರಮಗಳಿಗೆ 1.43 ಶತಕೋಟಿ ಡಾಲರ್ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ವಿಶ್ವಸಂಸ್ಥೆ ಚಾಲನೆ ನೀಡಿದೆ. ವಿಶ್ವದ ಅತೀ ಬಡ ದೇಶಗಳಲ್ಲಿ ಒಂದಾಗಿರುವ ಸೊಮಾಲಿಯಾ ದಶಕಗಳಿಂದಲೂ ಮುಂದುವರಿದಿರುವ ಅಂತರ್ಯುದ್ಧದಿಂದ ಮತ್ತು ಪದೇ ಪದೇ ಸಂಭವಿಸುವ ಪ್ರಾಕೃತಿಕ ದುರಂತಗಳ ಹೊಡೆತದಿಂದ ಜರ್ಝರಿತಗೊಂಡಿದೆ. ಅಲ್ಖೈದಾಗೆ ಸಂಯೋಜಿತ ಅಲ್-ಶಬಾಬ್ ಗುಂಪು ಸರಕಾರದ ವಿರುದ್ಧ ಸಂಘರ್ಷ ನಡೆಸುತ್ತಿದೆ.
ಸೊಮಾಲಿಯಾ ಸಂಕೀರ್ಣವಾದ, ಸುದೀರ್ಘವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ತೀರಾ ಕಡಿಮೆ ಪ್ರಮಾಣದ ಮಳೆಯಾದ್ದರಿಂದ ಬರಗಾಲದ ಭೀತಿ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಏಜೆನ್ಸಿ ಒಸಿಎಚ್ಎ ಹೇಳಿದೆ. ಸೊಮಾಲಿಯಾ ಸರಕಾರದ ಜತೆ ಸೋಮವಾರ ಪ್ರಾರಂಭಿಸಲಾಗಿರುವ ಧನಸಹಾಯ ಮನವಿಯು ದೇಶದಲ್ಲಿ ಸುಮಾರು 4.6 ದಶಲಕ್ಷ ಬಡಜನರಿಗೆ ನೆರವಾಗುವ ಉದ್ದೇಶ ಹೊಂದಿದೆ ಎಂದು ಒಸಿಎಚ್ಎ ಹೇಳಿದೆ.





