7 ಒತ್ತೆಯಾಳುಗಳು ಇಸ್ರೇಲ್ ದಾಳಿಗೆ ಬಲಿ: ಹಮಾಸ್

Photo: PTI
ಗಾಝಾ: ಗಾಝಾದ ಅತಿ ದೊಡ್ಡ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಗಳಲ್ಲಿ ಮೂವರು ವಿದೇಶಿ ಪಾಸ್ಪೋರ್ಟ್ದಾರರು ಸೇರಿದಂತೆ ಒಟ್ಟು 7 ಮಂದಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆಂದು ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಬುಧವಾರ ತಿಳಿಸಿದೆ. ಈ ಒತ್ತೆಯಾಳುಗಳನ್ನು ಹಮಾಸ್ ಅಕ್ಟೋಬರ್ 7ರಂದು ಇಸ್ರೇಲ್ನ ಗಡಿಪ್ರದೇಶದಲ್ಲಿ ನಡೆಸಿದ ದಾಳಿಯ ಸಂದರ್ಭದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಆದರೆ ಹಮಾಸ್ನ ಸೇನಾ ದಳವಾದ ಎಝೆದೈನ್ ಅಲ್ ಖಾಸ್ಸಮ್ ನೀಡಿದ ಈ ಹೇಳಿಕೆಯನ್ನು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲವೆಂದು ವರದಿಗಳು ತಿಳಿಸಿವೆ. ಇಸ್ರೇಲ್ನ ದಾಳಿಗಳಲ್ಲಿ ಸುಮಾರು 50 ಮಂದಿ ಒತ್ತೆಯಾಳುಗಳು ಮಡಿದಿದ್ದಾರೆಂದು ಅಲ್ ಖ್ವಾಸಮ್ ಬ್ರಿಗೇಡ್ ತಿಳಿಸಿತ್ತು.
ಹಮಾಸ್ ಹೋರಾಟಗಾರರು ಇಸ್ರೇಲ್ ಗಡಿಯನ್ನು ದಾಟಿ ದಾಳಿ ನಡೆಸಿದ ಬಳಿಕ ಸುಮಾರು 240 ಒತ್ತೆಯಾಳುಗಳನ್ನು ಕೊಂಡೊಯ್ದಿದ್ದರು.
ಗಾಝಾದ ಜಬಾಲಿಯಾ ನಿರಾಶ್ರಿತ ಶಿಬಿರದ ಮೇಲೆ ಮಂಗಳವಾರ ಇಸ್ರೇಲ್ ನಡೆಸಿದ ವಾಯುದಾಳಿಗಳಲ್ಲಿ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತಪಟ್ಟವರಲ್ಲಿ ಮೂರನೆ ಎರಡರಷ್ಟು ಮಂದಿ ಮಹಿಳೆಯರು ಹಾಗೂ ಮಕ್ಕಳೆಂದು ಅದು ಹೇಳಿದೆ.
ಈ ದಾಳಿಯಲ್ಲಿ ಹಮಾಸ್ನ ಜಬಾಲಿಯಾ ಬ್ರಿಗೇಡ್ನ ಕಮಾಂಡರ್ ಇಬ್ರಾಹೀಂ ಬಿಯಾರಿಯನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಜಬಾಲಾ ನಿರಾಶ್ರಿತ ಶಿಬಿರದ ಕಟ್ಟಡಗಳ ಕೆಳಗಿರುವ ಹಮಾಸ್ನ ಭೂಗತ ಸೇನಾ ಮೂಲಸೌಕರ್ಯಗಳನ್ನು ನಾಶಪಡಿಸಿರುವುದಾಗಿ ಹಮಾಸ್ ಹೇಳಿದೆ.







