78.3 ಕೋಟಿ ಜನರಿಗೆ ಆಹಾರದ ಕೊರತೆ; 14.8 ಕೋಟಿ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ
ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ: ಕಳೆದ ವರ್ಷ ಹೆಚ್ಚಿನ ಜನರು ಪೌಷ್ಟಿಕ ಆಹಾರವನ್ನು ಪಡೆಯಲು ಸಾಧ್ಯವಾಗಿಲ್ಲ ಮತ್ತು ಇದರಿಂದಾಗಿ 14.8 ಕೋಟಿ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಸಮಸ್ಯೆ ತಲೆದೋರಿದೆ ಎಂದು 2022ಕ್ಕೆ ಸಂಬಂಧಿಸಿದ ಜಾಗತಿಕ ಆಹಾರ ಭದ್ರತೆ ಕುರಿತ ವರದಿಯಲ್ಲಿ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
2022ರಲ್ಲಿ 2.4 ಶತಕೋಟಿ ಜನರಿಗೆ ನಿರಂತರ ಆಹಾರ ದೊರಕಿಲ್ಲ, 78.3 ಕೋಟಿ ಜನರಿಗೆ ಆಹಾರದ ಕೊರತೆಯಾಗಿ ಉಪವಾಸ ಬೀಳುವ ಪರಿಸ್ಥಿತಿಯಿತ್ತು ಮತ್ತು ಪೌಷ್ಟಿಕ ಆಹಾರ ಲಭಿಸದೆ 14.8 ಕೋಟಿ ಮಕ್ಕಳು ಕುಂಠಿತ ಬೆಳವಣಿಗೆ ಹೊಂದುವಂತಾಗಿದೆ ಎಂದು ವರದಿ ಹೇಳಿದೆ.
‘2021 ಮತ್ತು 2022ರಲ್ಲಿ ಜಾಗತಿಕ ಆಹಾರ ಕೊರತೆ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ ಹಲವು ಪ್ರದೇಶಗಳಲ್ಲಿ ಆಹಾರ ಬಿಕ್ಕಟ್ಟು ತೀವ್ರಗೊಂಡಿದೆ. ಪಶ್ಚಿಮ ಏಶ್ಯ, ಕೆರಿಬಿಯನ್ ದ್ವೀಪಗಳು ಹಾಗೂ ಆಫ್ರಿಕಾದಲ್ಲಿ 20ಶೇ.ದಷ್ಟು ಜನರು ಆಹಾರದ ಕೊರತೆ ಎದುರಿಸುತ್ತಿದ್ದು ಇದು ಜಾಗತಿಕ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ. ಜಾಗತಿಕ ಸಾಂಕ್ರಾಮಿಕದಿಂದ ಚೇತರಿಕೆ ಅಸಮಾನವಾಗಿದೆ
ಮತ್ತು ಉಕ್ರೇನ್ನಲ್ಲಿನ ಯುದ್ಧವು ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಆಹಾರ ಕ್ರಮಗಳ ಮೇಲೆ ಪರಿಣಾಮ ಬೀರಿದೆ. ಇದು ಹವಾಮಾನ ಬದಲಾವಣೆ, ಸಂಘರ್ಷ ಮತ್ತು ಆರ್ಥಿಕ ಅಸ್ಥಿರತೆಯ ಅಂಚಿನಲ್ಲಿರುವವರನ್ನು ಮತ್ತಷ್ಟು ಇಕ್ಕಟ್ಟಿಗೆ ನೂಕಲಿದೆ’ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಒ)ಯ ಪ್ರಧಾನ ನಿರ್ದೇಶಕ ಕ್ಯುಯು ಡೊಂಗ್ಯು ಹೇಳಿದ್ದಾರೆ. 2021ರಲ್ಲಿ 3.1 ಶತಕೋಟಿಗೂ ಅಧಿಕ ಜನತೆ, ಅಂದರೆ ಜಾಗತಿಕ ಜನಸಂಖ್ಯೆಯ 42ಶೇ.ದಷ್ಟು ಜನ ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗಿಲ್ಲ. 2019ಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 13.40 ಕೋಟಿ ಜನರು ಆರೋಗ್ಯಕರ ಆಹಾರದಿಂದ ವಂಚಿತರಾಗಿದ್ದಾರೆ ಎಂದವರು ಹೇಳಿದ್ದಾರೆ. ಅನಾರೋಗ್ಯಕರ ಆಹಾರ ಸೇವಿಸುವ ಜನರ ಸಂಖ್ಯೆಯನ್ನು ಕಡಿಮೆ ಮಾಡುವುದು ಬಹುದೊಡ್ಡ ಸವಾಲಾಗಿದೆ.
ಏಕೆಂದರೆ ಹೀಗೆ ಮಾಡಬೇಕಾದರೆ ನಾವು ಕೃಷಿ-ಆಹಾರ ವ್ಯವಸ್ಥೆಯಲ್ಲಿ ನಮ್ಮ ಸಂಪನ್ಮೂಲಗಳನ್ನು ಬಳಸುವ ವಿಧಾನವನ್ನು ಗಣನೀಯವಾಗಿ ಬದಲಾಯಿಸಬೇಕಿದೆ. 2022ರಲ್ಲಿ ಸರಾಸರಿ 73.5 ಕೋಟಿ ಜನರು ದೀರ್ಘಕಾಲದ ಅಪೌಷ್ಟಿಕತೆಯನ್ನು ಹೊಂದಿದ್ದಾರೆ. ಇದು 2019, ಅಂದರೆ ಕೋವಿಡ್ ಸಾಂಕ್ರಾಮಿಕ ಆರಂಭವಾಗುವುದಕ್ಕೂ ಮೊದಲಿನ ಅವಧಿಗಿಂತ 12.2 ಕೋಟಿಯಷ್ಟು ಅಧಿಕವಾಗಿದೆ. 2030ರ ವೇಳೆಗೂ 60ಕೋಟಿಗೂ ಅಧಿಕ ಜನರು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 2030ರ ವೇಳೆಗೆ ಉಪವಾಸ ಬೀಳುವವರ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ವಿಶ್ವಸಂಸ್ಥೆಯ ಗುರಿಗಿಂತ ಇದು ಬಹಳಷ್ಟು ದೂರವಿದೆ ಎಂದು ಎಫ್ಎಒದ ಮುಖ್ಯ ಆರ್ಥಿಕ ತಜ್ಞ ಮ್ಯಾಕ್ಸಿಮೊ ಟೊರೆರೊ ಹೇಳಿದ್ದಾರೆ.
14.8 ಕೋಟಿ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಸಮಸ್ಯೆಯಿದ್ದರೆ 4.5 ಕೋಟಿ ಮಕ್ಕಳು ತಮ್ಮ ವಯಸ್ಸಿಗೆ ಹೋಲಿಸಿದರೆ ಅತೀ ತೆಳ್ಳಗಿದ್ದರೆ, 3.7 ಕೋಟಿ ಜನತೆ ಅಧಿಕ ತೂಕವನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಎಫ್ಎಒ, ವಿಶ್ವ ಆಹಾರ ಕಾರ್ಯಕ್ರಮ, ಕೃಷಿ ಅಭಿವೃದ್ಧಿಯ ಅಂತರ್ರಾಷ್ಟ್ರೀಯ ಸಂಸ್ಥೆ, ಮಕ್ಕಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ(ಯುನಿಸೆಫ್) ಹಾಗೂ ವಿಶ್ವ ಆಹಾರ ಸಂಘಟನೆ ಈ ವರದಿ ತಯಾರಿಸಿದೆ.
ಸಂಸ್ಕರಿಸಿದ ಆಹಾರ ಹೆಚ್ಚು ಬಳಕೆ
ಸಾಮಾನ್ಯವಾಗಿ, ಗ್ರಾಮೀಣ ಜನರು ತಾವು ಉತ್ಪಾದಿಸುವುದನ್ನೇ ಸೇವಿಸುತ್ತಾರೆ ಎಂಬ ಭಾವನೆಯಿದೆ. ಆದರೆ ಈ ಪ್ರವೃತ್ತಿ ಈಗ ಬದಲಾಗಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಜನರು ಕೂಡಾ ಸಾಮೂಹಿಕ ಮಾರುಕಟ್ಟೆ ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕುಟುಂಬಕ್ಕೆ ಅಗತ್ಯವಿರುವ ಆಹಾರ ಪ್ರಮಾಣದ ಸುಮಾರು 30ಶೇ.ದಷ್ಟನ್ನು ಮಾರುಕಟ್ಟೆಯಿಂದ ಖರೀದಿಸಲಾಗುತ್ತಿದೆ. ಅರೆ-ನಗರ ಮತ್ತು ನಗರ ಪ್ರದೇಶದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಬಳಸುತ್ತಿರುವುದು ಅಪೌಷ್ಟಿಕತೆ ಸಮಸ್ಯೆಗೆ ಪ್ರಮುಖ ಕಾರಣ ಎಂದು ಮ್ಯಾಕ್ಸಿಮೊ ಟೊರೆರೊ ಹೇಳಿದ್ದಾರೆ.