ಒಂದೇ ಕೋಣೆಯಿಂದ ಆರಂಭವಾದ ಉದ್ಯಮ ವಿಶ್ವಕಪ್ ವರೆಗೆ; FIFA ಫುಟ್ಬಾಲ್ ಹಿಂದೆ ಪಾಕ್ ಉದ್ಯಮಿಯ ಯಶೋಗಾಥೆ

Photo: gulfnews
ದುಬೈ, ಜೂ.21: 2026ರ ಫಿಫಾ ವಿಶ್ವಕಪ್ನಲ್ಲಿ ದಾಖಲೆಯಾಗುವ ಪ್ರತಿಯೊಂದು ಗೋಲು, ಕೊನೆಯ ಕ್ಷಣದ ಪ್ರತಿಯೊಂದು ಗೆಲುವು, ಪಂದ್ಯದ ನಿರ್ಣಾಯಕ ಪೆನಾಲ್ಟಿ ಸೇರಿದಂತೆ ಟೂರ್ನಿಯ ಎಲ್ಲ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವ ಚೆಂಡು ಪಾಕಿಸ್ತಾನದ ಸಿಯಾಲ್ಕೋಟ್ನಲ್ಲಿ ತಯಾರಾಗಿದೆ. ಆ ಚೆಂಡಿನ ಹಿಂದೆ ಪಾಕಿಸ್ತಾನ ರೈಲ್ವೆಯ ಮಾಜಿ ಉದ್ಯೋಗಿ ಹಾಗೂ ಸಿವಿಲ್ ಇಂಜಿನಿಯರ್ ಖ್ವಾಜಾ ಮಸೂದ್ ಅಖ್ತರ್ ಅವರ ಮೂರು ದಶಕಗಳ ಪರಿಶ್ರಮದ ಯಶೋಗಾಥೆಯಿದೆ.
1991ರಲ್ಲಿ ಸಿಯಾಲ್ಕೋಟ್ನಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ‘ಫಾರ್ವರ್ಡ್ ಸ್ಪೋರ್ಟ್ಸ್’ ಸಂಸ್ಥೆ ಇಂದು ಫಿಫಾ ವಿಶ್ವಕಪ್ಗೆ ಅಧಿಕೃತ ಪಂದ್ಯದ ಚೆಂಡುಗಳನ್ನು ಪೂರೈಸುತ್ತಿದೆ. ಆರಂಭದ ದಿನಗಳಲ್ಲಿ ಸಂಸ್ಥೆಯಲ್ಲಿ ಕೇವಲ 20 ಉದ್ಯೋಗಿಗಳು ಮಾತ್ರ ಇದ್ದರು. ಒಂದು ಸಣ್ಣ ಕೋಣೆಯಲ್ಲಿ ಉದ್ಯಮ ಪ್ರಾರಂಭವಾಗಿತ್ತು. ಮೂರುವರೆ ದಶಕಗಳ ಬಳಿಕ ಇದೇ ಸಂಸ್ಥೆ ವರ್ಷಕ್ಕೆ ಸುಮಾರು 2.05 ಕೋಟಿ ಫುಟ್ಬಾಲ್ಗಳನ್ನು ಉತ್ಪಾದಿಸುತ್ತಿದ್ದು, ಸತತ ನಾಲ್ಕು ಫಿಫಾ ವಿಶ್ವಕಪ್ ಗಳಿಗೆ ಪಂದ್ಯದ ಅಧಿಕೃತ ಚೆಂಡುಗಳನ್ನು ತಯಾರಿಸಿದ ಸಾಧನೆ ಮಾಡಿದೆ.
ಬ್ರೆಝಿಲ್ ನಲ್ಲಿ ನಡೆದ 2014ರ ವಿಶ್ವಕಪ್ ಗೆ ‘ಬ್ರಝುಕಾ’, ರಷ್ಯಾದಲ್ಲಿ ನಡೆದ 2018ರ ವಿಶ್ವಕಪ್ ಗೆ ‘ಟೆಲ್ಸ್ಟಾರ್ 18’, ಖತರ್ ನಲ್ಲಿ ನಡೆದ 2022ರ ವಿಶ್ವಕಪ್ ಗೆ ‘ಅಲ್ ರಿಹ್ಲಾ’ ಹಾಗೂ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ವಿಶ್ವಕಪ್ ಗೆ ‘ಟ್ರಯೋಂಡಾ’ ಚೆಂಡುಗಳನ್ನು ಫಾರ್ವರ್ಡ್ ಸ್ಪೋರ್ಟ್ಸ್ ತಯಾರಿಸಿದೆ.
Photo: gulfnews
ಫುಟ್ಬಾಲ್ ಗಳ ರಾಜಧಾನಿ ಸಿಯಾಲ್ಕೋಟ್
ಪಾಕಿಸ್ತಾನದ ಸಿಯಾಲ್ಕೋಟ್ ನಗರವನ್ನು ‘ವಿಶ್ವದ ಫುಟ್ಬಾಲ್ ಕಾರ್ಖಾನೆ’ ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಬಳಕೆಯಾಗುವ ಫುಟ್ಬಾಲ್ ಗಳ ಸುಮಾರು ಶೇ 70ರಷ್ಟು ಉತ್ಪಾದನೆ ಇಲ್ಲಿಯೇ ನಡೆಯುತ್ತದೆ. ಖ್ವಾಜಾ ಮಸೂದ್ ಅಖ್ತರ್ ಅವರ ಯಶೋಗಾಥೆಯೂ ಈ ನಗರದ ಫುಟ್ಬಾಲ್ ಉದ್ಯಮದೊಂದಿಗೆ ನಿಕಟ ಸಂಬಂಧ ಹೊಂದಿದೆ.
ಸ್ಥಳೀಯ ಶಾಲೆಗಳು ಮತ್ತು ಕ್ಲಬ್ಗಳಲ್ಲಿ ಬಳಸುವ ತರಬೇತಿ ಚೆಂಡುಗಳಿಂದ ಹಿಡಿದು ವಿಶ್ವಕಪ್ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಬಳಸುವ ಚೆಂಡುಗಳವರೆಗೆ ಸಿಯಾಲ್ಕೋಟ್ನಲ್ಲಿ ತಯಾರಾಗುತ್ತವೆ. ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿನ ಫುಟ್ಬಾಲ್ ಉದ್ಯಮವು ಆರಂಭದಲ್ಲಿ ಚೆಂಡುಗಳ ದುರಸ್ತಿ ಕಾರ್ಯಕ್ಕೆ ಸೀಮಿತವಾಗಿತ್ತು. ಬಳಿಕ ಅದು ಜಾಗತಿಕ ಮಟ್ಟದ ಉತ್ಪಾದನೆ ಮತ್ತು ರಫ್ತು ವಲಯವಾಗಿ ಬೆಳೆದಿದೆ.
ಸಿಯಾಲ್ಕೋಟ್ನ ಫುಟ್ಬಾಲ್ ಉದ್ಯಮವು ಪಾಕಿಸ್ತಾನದ ರಫ್ತಿನಲ್ಲಿ ಮಹತ್ವದ ಪಾಲು ಹೊಂದಿದೆ. ಇಲ್ಲಿನ ಕಾರ್ಖಾನೆಗಳಿಂದ ಪ್ರತಿದಿನ ಸುಮಾರು 3 ಲಕ್ಷ ಫುಟ್ಬಾಲ್ಗಳು ವಿವಿಧ ದೇಶಗಳಿಗೆ ರವಾನೆಯಾಗುತ್ತವೆ. ಒಟ್ಟಾರೆಯಾಗಿ ಪಾಕಿಸ್ತಾನವು ವರ್ಷಕ್ಕೆ ಸುಮಾರು 4 ಕೋಟಿ ಫುಟ್ಬಾಲ್ಗಳನ್ನು ರಫ್ತು ಮಾಡುತ್ತದೆ.
ಸಿಯಾಲ್ಕೋಟ್ನ ಫುಟ್ಬಾಲ್ ಉತ್ಪಾದನಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಸ್ವಿಸ್ ಛಾಯಾಗ್ರಾಹಕ ಸ್ಟೀಫನ್ ಬೊಹ್ರೆರ್, ಅಲ್ಲಿನ ಉತ್ಪಾದನೆಯ ಪ್ರಮಾಣವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಸಿಯಾಲ್ಕೋಟ್ನಲ್ಲಿ ನಡೆಯುವ ಫುಟ್ಬಾಲ್ ಉತ್ಪಾದನೆಯ ಪ್ರಮಾಣ ಅದ್ಭುತವಾಗಿದೆ. ಪ್ರತಿದಿನ ಸುಮಾರು 3 ಲಕ್ಷ ಚೆಂಡುಗಳು ಕಾರ್ಖಾನೆಗಳಿಂದ ಹೊರಬರುತ್ತವೆ. ಅಲ್ಲಿನ ಕಾರ್ಮಿಕರ ಕೌಶಲ್ಯದಿಂದ ತಯಾರಾಗುವ ಈ ಚೆಂಡುಗಳು ವಿಶ್ವದ ವಿವಿಧ ದೇಶಗಳಿಗೆ ತಲುಪುತ್ತವೆ" ಎಂದು ಅವರು ಹೇಳಿದ್ದಾರೆ.
1982ರಿಂದ ವಿಶ್ವಕಪ್ ನ ಅಧಿಕೃತ ಚೆಂಡುಗಳ ತಯಾರಿಕೆಯಲ್ಲಿ ಸಿಯಾಲ್ಕೋಟ್ ಪಾತ್ರವಹಿಸುತ್ತಿದ್ದರೂ, ಈ ಸಂಗತಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿರಲಿಲ್ಲ.
Photo: gulfnews
ರೈಲ್ವೆ ಉದ್ಯೋಗಿಯಿಂದ ವಿಶ್ವಮಟ್ಟದ ಉದ್ಯಮಿ
ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ಅಖ್ತರ್, ಆರಂಭದಲ್ಲಿ ಪಾಕಿಸ್ತಾನ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು. ಸಿಯಾಲ್ಕೋಟ್ನಲ್ಲಿ ಕ್ರೀಡಾ ಸಾಮಗ್ರಿಗಳ ವ್ಯವಹಾರ ನಡೆಸುತ್ತಿದ್ದ ಅವರ ಚಿಕ್ಕಪ್ಪನ ಪ್ರೇರಣೆಯಿಂದ ಬಳಿಕ ಫುಟ್ಬಾಲ್ ಉದ್ಯಮದತ್ತ ಮುಖ ಮಾಡಿದರು. ಆದರೆ ಈ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಆರಂಭದಲ್ಲಿ ಅವರು ಹೆಚ್ಚು ಆಸಕ್ತಿ ತೋರಿರಲಿಲ್ಲ.
"ಫುಟ್ಬಾಲ್ ತಯಾರಿಕಾ ಕ್ಷೇತ್ರಕ್ಕೆ ಬರುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಈ ಉದ್ಯಮದ ಅನುಭವವೂ ನನಗಿರಲಿಲ್ಲ. ಆದರೂ ತಾಂತ್ರಿಕ ಜ್ಞಾನ ಮತ್ತು ಚಿಕ್ಕಪ್ಪನ ಪ್ರೋತ್ಸಾಹದಿಂದ ಈ ಕ್ಷೇತ್ರಕ್ಕೆ ಕಾಲಿಟ್ಟೆ" ಎಂದು ಅಖ್ತರ್ ಮುಸ್ಲಿಂ ನೆಟ್ವರ್ಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
Photo: gulfnews
ಅಖ್ತರ್ ಅವರು ಆರಂಭದಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಕುಟುಂಬದ ಕಂಪೆನಿಯಲ್ಲಿ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು. ನಂತರ ಸ್ವತಂತ್ರವಾಗಿ ಉದ್ಯಮ ಆರಂಭಿಸಿದರು. ಆರಂಭಿಕ ದಿನಗಳಲ್ಲಿ ಅವರ ಸಂಸ್ಥೆ ತಿಂಗಳಿಗೆ ಸುಮಾರು 1,000 ಫುಟ್ಬಾಲ್ ಗಳನ್ನು ಮಾತ್ರ ತಯಾರಿಸುತ್ತಿತ್ತು. ಈಗಾಗಲೇ ಹಲವು ದೊಡ್ಡ ಕಂಪೆನಿಗಳು ಮಾರುಕಟ್ಟೆಯಲ್ಲಿದ್ದ ಕಾರಣ ಸಂಸ್ಥೆಯನ್ನು ಬೆಳೆಸುವುದು ಸುಲಭವಾಗಿರಲಿಲ್ಲ.
ಅಡಿಡಾಸ್ ಜೊತೆಗಿನ ಒಪ್ಪಂದವೇ ತಿರುವು
1994ರಲ್ಲಿ ಅಡಿಡಾಸ್ ಜೊತೆಗಿನ ಒಪ್ಪಂದ ಆರಂಭವಾದ ಬಳಿಕ ಸಂಸ್ಥೆಯ ಬೆಳವಣಿಗೆ ವೇಗ ಪಡೆದುಕೊಂಡಿತು.
"ಅಡಿಡಾಸ್ ಜೊತೆಗಿನ ಸಹಭಾಗಿತ್ವ ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿತು. ಹಿನ್ನಡೆಗಳು ಮತ್ತು ಸವಾಲುಗಳು ಎದುರಾದರೂ ನಿರಂತರ ಪರಿಶ್ರಮದಿಂದ ಮುನ್ನಡೆಯಲು ಸಾಧ್ಯವಾಯಿತು" ಎಂದು ಅಖ್ತರ್ ಹೇಳಿದ್ದಾರೆ.
Photo: gulfnews
ತಂತ್ರಜ್ಞಾನದಿಂದ ಮುಂಚೂಣಿಗೆ
ಫಾರ್ವರ್ಡ್ ಸ್ಪೋರ್ಟ್ಸ್ ಮೂರು ದಶಕಗಳ ಕಾಲ ಉದ್ಯಮದ ಮುಂಚೂಣಿಯಲ್ಲಿ ಉಳಿಯಲು ಕಾರಣ ಅದರ ನಿರಂತರ ನವೀಕರಣ. ಆರಂಭದಲ್ಲಿ ಕೈಯಿಂದ ಹೊಲಿಯುವ ಫುಟ್ಬಾಲ್ಗಳನ್ನು ತಯಾರಿಸುತ್ತಿದ್ದ ಸಂಸ್ಥೆ, 2007ರಲ್ಲಿ ಥರ್ಮೋ–ಬಾಂಡೆಡ್ ತಂತ್ರಜ್ಞಾನ ಅಳವಡಿಸಿಕೊಂಡಿತು. ಬಳಿಕ ಯಂತ್ರ–ಹೊಲಿಗೆ, ಲ್ಯಾಮಿನೇಟೆಡ್ ತಂತ್ರಜ್ಞಾನ ಮತ್ತು ಇದೀಗ 2026ರ ವಿಶ್ವಕಪ್ಗಾಗಿ ಸೆನ್ಸಾರ್ ಅಳವಡಿಸಿದ ‘ಟ್ರಯೋಂಡಾ’ ಚೆಂಡನ್ನು ಅಭಿವೃದ್ಧಿಪಡಿಸಿದೆ.
ವಿಶ್ವಕಪ್ನಲ್ಲಿ ಬಳಸುವ ಚೆಂಡಿನ ಅಭಿವೃದ್ಧಿಗೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷಗಳು ಬೇಕಾಗುತ್ತವೆ. ಗುಣಮಟ್ಟ, ಬಾಳಿಕೆ ಮತ್ತು ವಿವಿಧ ಹವಾಮಾನಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಫಿಫಾ ನಿಗದಿಪಡಿಸಿರುವ ಕಟ್ಟುನಿಟ್ಟಿನ ಪರೀಕ್ಷೆಗಳನ್ನು ಅದು ಯಶಸ್ವಿಯಾಗಿ ಪೂರೈಸಬೇಕು.
ಚೆಂಡುಗಳ ಗುಣಮಟ್ಟ ಮತ್ತು ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ತಂತ್ರಜ್ಞಾನ ಮತ್ತು ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಉತ್ಪಾದನಾ ಪ್ರಕ್ರಿಯೆಯೂ ಗಮನಾರ್ಹವಾಗಿ ವೇಗ ಪಡೆದಿದ್ದು, ಉತ್ಪಾದನೆ ಮತ್ತು ಪೂರೈಕೆಗೆ ಬೇಕಾಗುವ ಅವಧಿ 90 ದಿನಗಳಿಂದ 15 ದಿನಗಳಿಗೆ ಇಳಿದಿದೆ.
‘ತಂತ್ರಜ್ಞಾನ ಎಲ್ಲವನ್ನೂ ಬದಲಾಯಿಸುತ್ತದೆ. ಫುಟ್ಬಾಲ್ ಉತ್ಪಾದನೆಯೂ ಬದಲಾಗುತ್ತಿದೆ. ನಾವು ಹೊಂದಿಕೊಳ್ಳದಿದ್ದರೆ ಹಿಂದೆ ಬೀಳುತ್ತಿದ್ದೆವು’ ಎಂದು ಅಖ್ತರ್ ಅಭಿಪ್ರಾಯಪಡುತ್ತಾರೆ.
ಪ್ರತಿದಿನ ಬೆಳಿಗ್ಗೆ ಕಾರ್ಖಾನೆಗೆ ಬಂದ ಕೂಡಲೇ ಅವರು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಭೇಟಿ ನೀಡುವುದು ದಿನಚರಿಯ ಭಾಗವಾಗಿದೆ.
‘ನಾವು ಈ ಮಟ್ಟ ತಲುಪಲು ಪ್ರಮುಖ ಕಾರಣ ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡಿದ ಆದ್ಯತೆ’ ಎಂದು ಅವರು ಹೇಳಿದ್ದಾರೆ.
Photo: gulfnews
ಯಶಸ್ಸಿನ ಹಿಂದಿನ ಮಹಿಳೆಯರು
ಫಾರ್ವರ್ಡ್ ಸ್ಪೋರ್ಟ್ಸ್ ಸಂಸ್ಥೆಯ ಕಾರ್ಯಪಡೆಯ ಪ್ರಮುಖ ಭಾಗ ಮಹಿಳೆಯರದ್ದಾಗಿದೆ. ಮಹಿಳಾ ಉದ್ಯೋಗಿಗಳನ್ನು ಉತ್ತೇಜಿಸಲು ಸಂಸ್ಥೆ ಸಾರಿಗೆ ಸೌಲಭ್ಯ, ಆರೋಗ್ಯ ಸೇವೆ ಹಾಗೂ ಕೆಲಸದ ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ.
ತಂತ್ರಜ್ಞಾನ ಬಳಕೆ ಹೆಚ್ಚಾಗಿದ್ದರೂ, ಫುಟ್ಬಾಲ್ ತಯಾರಿಕೆಯ ಹಲವು ಹಂತಗಳಲ್ಲಿ ಕಾರ್ಮಿಕರ ಕೌಶಲ್ಯ ಇನ್ನೂ ಪ್ರಮುಖವಾಗಿದೆ. ಹೊಲಿಗೆ, ಬಣ್ಣ ಬಳಿಯುವುದು, ಲೋಗೋ ಅಳವಡಿಸುವುದು ಮತ್ತು ಗುಣಮಟ್ಟದ ಪರಿಶೀಲನೆ ಸೇರಿದಂತೆ ಹಲವು ಕಾರ್ಯಗಳನ್ನು ಅವರು ನಿರ್ವಹಿಸುತ್ತಿದ್ದಾರೆ.
"ಅವಕಾಶ ದೊರೆತರೆ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ. ನಮ್ಮ ಸಂಸ್ಥೆಯ ಯಶಸ್ಸಿನಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ" ಎಂದು ಅಖ್ತರ್ ಹೇಳಿದ್ದಾರೆ.
Photo: gulfnews
ವಿಶ್ವಕಪ್ನಲ್ಲಿ ಆಡದ ದೇಶ, ಚೆಂಡು ಮಾತ್ರ ಅದರದು!
ಪಾಕಿಸ್ತಾನವು ಫುಟ್ಬಾಲ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿಲ್ಲ. ಫಿಫಾ ವಿಶ್ವ ಶ್ರೇಯಾಂಕದಲ್ಲಿ 198ನೇ ಸ್ಥಾನದಲ್ಲಿರುವ ದೇಶದ ರಾಷ್ಟ್ರೀಯ ತಂಡವು ಇನ್ನೂ ವಿಶ್ವಕಪ್ ಗೆ ಅರ್ಹತೆ ಪಡೆದಿಲ್ಲ. ಆದರೂ ವಿಶ್ವಕಪ್ ನಲ್ಲಿ ಬಳಸುವ ಅಧಿಕೃತ ಪಂದ್ಯದ ಚೆಂಡುಗಳನ್ನು ಇದೇ ದೇಶ ತಯಾರಿಸುತ್ತಿರುವುದು ವಿಶೇಷ.
ವಿಶ್ವಕಪ್ನಲ್ಲಿ ಗೋಲುಗಳು ದಾಖಲಾಗುವಾಗ, ಚಾಂಪಿಯನ್ ತಂಡ ನಿರ್ಧಾರವಾಗುವಾಗ ಬಳಸುವ ಅಧಿಕೃತ ಪಂದ್ಯದ ಚೆಂಡುಗಳನ್ನು ಸಿಯಾಲ್ಕೋಟ್ನ ಫಾರ್ವರ್ಡ್ ಸ್ಪೋರ್ಟ್ಸ್ ಸಂಸ್ಥೆ ತಯಾರಿಸಿದೆ.
‘ಯಶಸ್ಸಿನ ಹಿಂದೆ ಯಾವುದೇ ಮಾಂತ್ರಿಕ ಸೂತ್ರವಿಲ್ಲ. ದೃಢಸಂಕಲ್ಪವಿದ್ದರೆ ಏನನ್ನಾದರೂ ಸಾಧಿಸಬಹುದು. ಇಚ್ಛೆ ಇದ್ದಲ್ಲಿ ದಾರಿ ತೆರೆಯುತ್ತದೆ' ಎಂಬುದು ಖ್ವಾಜಾ ಮಸೂದ್ ಅಖ್ತರ್ ಅವರ ಯಶಸ್ಸಿನ ಗುಟ್ಟು.
ಸೌಜನ್ಯ: gulfnews.com






