ಈ ವಾರಾಂತ್ಯದಲ್ಲಿ ಇರಾನ್ ಜೊತೆ ಒಪ್ಪಂದದ ನಿರೀಕ್ಷೆ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜೂ.4: ಇರಾನ್ ಜೊತೆಗಿನ ಮಾತುಕತೆಗಳು ಈ ವಾರಾಂತ್ಯದಲ್ಲಿ ದೊಡ್ಡ ಯಶಸ್ಸನ್ನು ಪಡೆಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಯಲ್ಲಿ ಯಾವುದೇ ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಲಾಗಿಲ್ಲ ಎಂದು ಇರಾನ್ ಪ್ರತಿಪಾದಿಸಿದೆ.
ಪ್ರದೇಶದಲ್ಲಿ ಹೊಸ ದಾಳಿಗಳ ಹೊರತಾಗಿಯೂ ಇರಾನ್ ಜೊತೆಗಿನ ಚರ್ಚೆಗಳು ಸಕಾರಾತ್ಮಕವಾಗಿ ಮುಂದುವರಿಯುತ್ತಿವೆ. ಮಾತುಕತೆಗಳು ನಿಜವಾಗಿಯೂ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಾರಾಂತ್ಯದಲ್ಲಿ ಒಪ್ಪಂದ ಸಾಧ್ಯವಾಗಬಹುದು ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಟ್ರಂಪ್ ಹೇಳಿದ್ದಾರೆ.
ಲೆಬನಾನ್ನಲ್ಲಿನ ಸಂಘರ್ಷದ ಬಗ್ಗೆ ಪ್ರತ್ಯೇಕ ಚರ್ಚೆ, ಮಾತುಕತೆ ನಡೆಯಬೇಕೆಂಬುದು ನನ್ನ ನಿಲುವಾಗಿದೆ. ಯಾಕೆಂದರೆ ಇದು ಪ್ರತ್ಯೇಕ ವಿಷಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಲೆಬನಾನ್ನಲ್ಲಿನ ಬೆಳವಣಿಗೆಗಳು ಯಾವುದೇ ವಿಶಾಲವಾದ ಪರಿಹಾರದೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ಇರಾನ್ ಪ್ರತಿಪಾದಿಸುತ್ತಿದೆ. ಲೆಬನಾನ್ನಲ್ಲಿ ಕದನ ವಿರಾಮದ ಹೊರತಾಗಿಯೂ ಗುಂಡಿನ ದಾಳಿ ಮುಂದುವರಿದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ` ಜಗತ್ತಿನ ಆ ಭಾಗದಲ್ಲಿ ಸಮತೋಲಿತ ರೀತಿಯಲ್ಲಿ ಗುಂಡಿನ ದಾಳಿ ನಡೆಸುವುದೂ ಕದನ ವಿರಾಮವಾಗುತ್ತದೆ' ಎಂದು ಟ್ರಂಪ್ ಉತ್ತರಿಸಿದ್ದಾರೆ.
ಆದರೆ, ಅಮೆರಿಕದ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಪ್ರಗತಿಯಾಗಿಲ್ಲ ಎಂದು ಇರಾನ್ ಪ್ರತಿಕ್ರಿಯಿಸಿದೆ. `ಅಮೆರಿಕನ್ನರೊಂದಿಗಿನ ಸಂವಹನವನ್ನು ಕಡಿತಗೊಳಿಸಲಾಗಿಲ್ಲ ಮತ್ತು ಲೆಬನಾನ್ ವಿರುದ್ಧದ ಆಕ್ರಮಣಗಳನ್ನು ನಿಲ್ಲಿಸುವ ಅಗತ್ಯದ ಬಗ್ಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಆದರೆ ಸಂಧಾನ ಪ್ರಕ್ರಿಯೆಯಲ್ಲಿ ಯಾವುದೇ ಸ್ಪಷ್ಟ ಪ್ರಗತಿಯನ್ನು ಸಾಧಿಸಲಾಗಿಲ್ಲ' ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿರುವುದಾಗಿ ತಸ್ನೀಮ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಲೆಬನಾನ್ ಮೇಲೆ ದಾಳಿ ನಡೆದರೆ ಇಸ್ರೇಲ್ ಮೇಲೆ ಪ್ರತಿದಾಳಿ: ಇರಾನ್
ಲೆಬನಾನ್ ಮೇಲೆ ನಡೆಯುವ ಯಾವುದೇ ಇಸ್ರೇಲಿ ದಾಳಿಯು ಸಂಘರ್ಷವನ್ನು ನಾಟಕೀಯವಾಗಿ ಉಲ್ಬಣಗೊಳಿಸುತ್ತದೆ. ಲೆಬನಾನ್ ಮೇಲಿನ ಯಾವುದೇ ದಾಳಿಯು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಪೂರ್ಣ ಪ್ರಮಾಣದಲ್ಲಿ ಯುದ್ಧ ಪುನರಾರಂಭಗೊಳ್ಳಲು ಕಾರಣವಾಗುತ್ತದೆ. ಇಸ್ರೇಲ್ ಲೆಬನಾನ್ನ ಮೇಲೆ ದಾಳಿ ಮಾಡಿದರೆ ಇಸ್ರೇಲ್ ಮೇಲೆ ದಾಳಿ ನಡೆಸಲು ನಮ್ಮ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂದು ಅರಾಘ್ಚಿ ಎಚ್ಚರಿಕೆ ನೀಡಿದ್ದಾರೆ.






