ತಲೆಗೂದಲು ಬಿಡಿಸಿದ ಕೊಲೆ ರಹಸ್ಯ
30 ವರ್ಷಗಳ ಹಿಂದೆ ಮಹಿಳೆಯ ಹತ್ಯೆಗೈದ ಎನ್‌ಆರ್‌ಐ ಗೆ ಜೀವಾವಧಿ

ಲಂಡನ್: ಮೂವತ್ತು ವರ್ಷಗಳ ಹಿಂದೆ ಮಹಿಳೆಯೊಬ್ಬರನ್ನು ಹತ್ಯೆಗೈದ ಭಾರತೀಯ ಮೂಲದ ಆರೋಪಿಗೆ ಲಂಡನ್ ನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
1994ರಲ್ಲಿ ಲಂಡನ್ನ ವೆಸ್ಟ್ಮಿನ್ಸ್ಟರ್ ಪ್ರದೇಶದ ನಿವಾಸಿ ಮರಿನಾ ಕೊಪ್ಪೆಲ್ ಅವರನ್ನು ಆಕೆಯ ನಿವಾಸದಲ್ಲಿ 140 ಸಲ ಇರಿದು ಹತ್ಯೆಗೈದ ಪ್ರಕರಣದಲ್ಲಿ 51 ವರ್ಷದ ಸಂದೀಪ್ ಪಟೇಲ್ ಅಪರಾಧಿಯೆಂದು ಲಂಡನ್ನ ಓಲ್ಡ್ ಬೈಲಿ ನ್ಯಾಯಾಲಯ ಶುಕ್ರವಾರ ಘೋಷಿಸಿತ್ತು. ಮರಿನಾರ ಬೆರಳುಂಗರದಲ್ಲಿ ಪತ್ತೆಯಾದ ಸಣ್ಣ ತಲೆಗೂದಲು, ಕೊಲೆಗಾರನನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಮರಿನಾ ಅವರ ಹಂತಕ ಯಾರೆಂಬುದನ್ನು ದೃಢಪಡಿಸಲು ತನಿಖಾ ತಂಡಕ್ಕೆ 2008ನೇ ಇಸವಿಯವರೆಗೂ ಸಾಧ್ಯವಾಗಲಿಲ್ಲ. ಈ ವೇಳೆ ಆಕೆಯ ಬೆರಳ ಉಂಗುರದಲ್ಲಿ ಅಂಟಿಕೊಂಡಿದ್ದ ತಲೆಗೂದಲನ್ನು ಪರಿಶೀಲನೆಗೊಳಪಡಿಸಲಾಯಿತು. ಆದಾಗ್ಯೂ 2022ರಲ್ಲಿ ಅತ್ಯಾಧುನಿಕ ತಂತಜ್ಞಾನಗಳ ಮೂಲಕ ಕೂದಲಿನ ಡಿಎನ್ಎ ಪರೀಕ್ಷೆ ನಡೆಸಿದಾಗ ಅದು ಸಂದೀಪ್ ನದ್ದೇ ಎಂಬುದು ಸಾಬೀತಾಯಿತು.
ಮರೀನಾ ಕೊಪ್ಪಲ್ ಹತ್ಯೆಯಲ್ಲಿ ಸಂದೀಪ್ನ ಪಾತ್ರವಿರುವ ಶಂಕೆಯಲ್ಲಿ ಕಳೆದ ವರ್ಷದ ಜನವರಿ 19ರಂದು ಆತನನ್ನು ಬಂಧಿಸಲಾಯಿತು. ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾದರ ರಕ್ತ ಸಿಕ್ತ ಹೆಜ್ಜೆಗುರುತುಗಳನ್ನು ಪಟೇಲ್ನ ಹೆಜ್ಜೆಗುರುತುಗಳ ಜೊತೆ ತಾಳೆ ಮಾಡಿದಾಗ ಸಾಮ್ಯತೆ ಕಂಡುಬಂದಿತ್ತು.
ತಲೆಗೂದಲಿನ ಡಿಎನ್ಎ, ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ಕೈಬೆರಳಚ್ಚುಗಳು, ಮರಿನಾರ ಫ್ಲ್ಯಾಟ್ನಿಂದ ಅಪಹರಿಸಿದ್ದ ಎಟಿಎಂ ಕಾರ್ಡ್ ಅನ್ನು ಆಕೆಯ ಮನೆಯಿಂದ ಅರ್ಧ ಮೈಲುದೂರದ ಎಟಿಎಂನಲ್ಲಿ ಬಳಕೆ ಮಾಡಿರುವುದು, ಇವೆಲ್ಲವೂ ಪಟೇಲ್ ಅಪರಾಧಿಯೆಂಬುದನ್ನು ಸಾಬೀತುಪಡಿಸಿವೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದರು.







