ಹವಾಯಿ: ಭಾರತದಿಂದ ಆಮದು ಮಾಡಿಕೊಂಡಿದ್ದ ಐತಿಹಾಸಿಕ ಆಲದ ಮರ ಕಾಳ್ಗಿಚ್ಚಿನಿಂದ ಸುಟ್ಟು ಕರಕಲು

Photo: indiatoday.in
ಹವಾಯಿ (ಅಮೆರಿಕಾ): ಭಾರತದಿಂದ ಆಮದು ಮಾಡಿಕೊಳ್ಳಲಾಗಿದ್ದ 150 ವರ್ಷದಷ್ಟು ಪುರಾತನ ಹಾಗೂ ಇಡೀ ಅಮೆರಿಕಾದಲ್ಲೇ ಅತ್ಯಂತ ಬೃಹತ್ ಆಲದ ಮರವು ಮವುಯಿಯ ಹವಾಯಿ ದ್ವೀಪದಲ್ಲಿ ಹಬ್ಬಿರುವ ಕಾಳ್ಗಿಚ್ಚಿನಲ್ಲಿ ಸುಟ್ಟು ಕರಕಲಾಗಿದೆ. ಈ ಕಾಳ್ಗಿಚ್ಚಿನಲ್ಲಿ ಈವರೆಗೆ ಹಲವಾರು ಕಟ್ಟಡಗಳು ಆಹುತಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು indiatoday.in ವರದಿ ಮಾಡಿದೆ.
ಹವಾಯಿಗಳಿಂದ ಪನಿಯಾನಾ ಎಂದು ಕರೆಸಿಕೊಳ್ಳುವ ಈ ಆಲದ ಮರವು, 1873ರಲ್ಲಿ ಮವುಯಿಯ ಲಹೈನಾ ಪಟ್ಟಣದಲ್ಲಿ ನೆಟ್ಟಾಗ ಕೇವಲ 8 ಅಡಿ ಎತ್ತರದ ಗಿಡವಾಗಿತ್ತು ಎಂದು ಅಂತರ್ಜಾಲ ತಾಣವಾದ lahainatown.com ವರದಿ ಮಾಡಿದೆ.
ಲಹೈನಾ ಪಟ್ಟಣದ ಪಥವನ್ನೇ ಬದಲಿಸಿದ ಚಿರಸ್ಮರಣೀಯ ಘಟನೆಯಾದ ಮೊದಲ ಅಮೆರಿಕಾ ಪ್ರೊಟೆಸ್ಟೆಂಟ್ ಮಿಷನರಿ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಈ ಮರವನ್ನು ಲಹೈನಾ ಪಟ್ಟಣದಲ್ಲಿ ನೆಡಲಾಗಿತ್ತು ಎನ್ನಲಾಗಿದೆ.
ಭಾರತದಿಂದ ಆಮದು ಮಾಡಿಕೊಳ್ಳಲಾಗಿದ್ದ ಈ ಆಲದ ಮರವನ್ನು ಲಹೈನಾ ನ್ಯಾಯಾಲಯ ಹಾಗೂ ಲಹೈನಾ ಬಂದರಿನ ಎದುರು 1873ರಲ್ಲಿ ನೆಡಲಾಗಿತ್ತು. ಈ ವಿಸ್ತಾರವಾದ ಆಲದ ಮರವು ಅಮೆರಿಕಾದಲ್ಲಿರುವ ಬೃಹತ್ ಆಲದ ಮರವಾಗಿದೆ. ಇದು ಪಟ್ಟಣದ ಮುಖ್ಯ ಬೀದಿಯಲ್ಲಿದ್ದು, ನಗರವೊಂದರ ಒಂದು ಹಂತದಷ್ಟು ದೊಡ್ಡ ಮಟ್ಟದ ಗಾತ್ರ ಹೊಂದಿರುವ ಈ ಆಲದ ಮರವು 60 ಅಡಿಯಷ್ಟು ಎತ್ತರ ಬೆಳೆದಿದೆ ಎಂದು ಅಂತರ್ಜಾಲ ತಾಣವಾದ gohawaii.com ವರದಿ ಮಾಡಿದೆ.
CNN ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಸದ್ಯ ಹಬ್ಬಿರುವ ಕಾಳ್ಗಿಚ್ಚಿನಿಂದ ಐತಿಹಾಸಿಕ ನಗರವಾದ ಲಹೈನಾದಲ್ಲಿ ಭಾರಿ ಪ್ರಮಾಣದ ನಾಶವಾಗಿದೆ. ಪಟ್ಟಣದ ಕೇಂದ್ರ ಪ್ರದೇಶವಂತೂ ಸಂಪೂರ್ಣವಾಗಿ ನಾಶವಾಗಿದೆ. ಬೆಂಕಿಯ ಕೆನ್ನಾಲಿಗೆಗಳು ವಿಸ್ತಾರವಾದ ಹಾಗೂ ಪವಿತ್ರವಾದ ಆಲದ ಮರದ ಮೇಲೆ ಮತ್ತೇನೂ ಬೆಳೆಯುವ ಸಣ್ಣ ಅವಕಾಶವನ್ನೂ ಉಳಿಸಿಲ್ಲ ಎಂದು ಹೇಳಿದೆ.