ಉಗಾಂಡಾದ ಟೂರೊ ಸಾಮ್ರಾಜ್ಯದ ರಾಜನಾಗಿ ಮಾಜಿ ಪತ್ರಕರ್ತ ನ್ಯಾಬೊಂಗೊ ಗೆ ಪಟ್ಟಾಭಿಷೇಕ

Photo Credit : AP
ಕಂಪಾಲಾ: ಉಗಾಂಡಾದ ಟೂರೊ ಸಾಮ್ರಾಜ್ಯದ ರಾಜನಾಗಿ ಮಾಜಿ ಪತ್ರಕರ್ತ ಹಾಗೂ ರಾಜಕುಮಾರ ಎಡ್ವರ್ಡ್ ರುಕಿಡಿ ನ್ಯಾಬೊಂಗೊ ಅವರನ್ನು ಪಟ್ಟಾಭಿಷೇಕ ಮಾಡಲಾಗಿದೆ ಎಂದು Aljazeera ವರದಿ ಮಾಡಿದೆ.
ಕಳೆದ ತಿಂಗಳು ‘ಬಾಲ ರಾಜ’ ಒಯೊ ಅವರ ನಿಧನದ ಬಳಿಕ ಟೂರೊ ಸಾಮ್ರಾಜ್ಯ ಶೋಕ ಮತ್ತು ಉತ್ತರಾಧಿಕಾರದ ವಿವಾದದಲ್ಲಿ ಸಿಲುಕಿತ್ತು. ಈ ನಡುವೆಯೇ ನ್ಯಾಬೊಂಗೊ ಅವರನ್ನು ನೂತನ ರಾಜನಾಗಿ ಆಯ್ಕೆ ಮಾಡಲಾಗಿದೆ.
ಸರ್ಕಾರಿ ಸ್ವಾಮ್ಯದ ಉಗಾಂಡಾ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ನಲ್ಲಿ ದೀರ್ಘಕಾಲ ಪ್ರಸಾರಕ ಹಾಗೂ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ನ್ಯಾಬೊಂಗೊ, ಅರಮನೆ ಪ್ರವೇಶಿಸುವ ಮುನ್ನ ರಾತ್ರಿ ವಿಧಿವಿಧಾನಗಳನ್ನು ನೆರವೇರಿಸಿ ರಾಜನಾಮ ಸ್ವೀಕರಿಸಿದರು.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಗಡಿಯ ಸಮೀಪದ ಪಶ್ಚಿಮ ಉಗಾಂಡಾದ ಫೋರ್ಟ್ ಪೋರ್ಟಲ್ ಪಟ್ಟಣದಲ್ಲಿ ಮಂಗಳವಾರ ಅವರನ್ನು ಅಧಿಕೃತವಾಗಿ ಪ್ರಜೆಗಳ ಮುಂದೆ ಪರಿಚಯಿಸಲಾಯಿತು.
ಉಗಾಂಡಾವನ್ನು ಒಗ್ಗೂಡಿಸುವ ಉದ್ದೇಶದಿಂದ 1960ರ ದಶಕದಲ್ಲಿ ಅಂದಿನ ಗಣರಾಜ್ಯ ಅಧ್ಯಕ್ಷರು ದೇಶದ ಸಾಂಪ್ರದಾಯಿಕ ಸಾಮ್ರಾಜ್ಯಗಳನ್ನು ರದ್ದುಪಡಿಸಿದ್ದರು. 1993ರಲ್ಲಿ ಅವುಗಳನ್ನು ಮರುಸ್ಥಾಪಿಸಲಾಯಿತು.
ಸಾಂಪ್ರದಾಯಿಕ ರಾಜರಿಗೆ ಸಾಂವಿಧಾನಿಕ ಅಧಿಕಾರವಿಲ್ಲ. ಅವರು ಪಕ್ಷಪಾತದ ರಾಜಕೀಯದಿಂದ ದೂರವಿರಬೇಕಾಗುತ್ತದೆ. ಆದರೂ, ಸಂಪ್ರದಾಯ ಮತ್ತು ಸಮುದಾಯದ ಗುರುತಿನ ರಕ್ಷಕರಾಗಿ ಅವರು ಗಮನಾರ್ಹ ಪ್ರಭಾವ ಹೊಂದಿದ್ದಾರೆ.
ಸ್ಥಳೀಯ ಭಾಷೆಗಳಿಗೆ ಒತ್ತು: ಪಟ್ಟಾಭಿಷೇಕ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಯೋವೆರಿ ಮುಸೆವೆನಿ, ಸಾಂಪ್ರದಾಯಿಕ ನಾಯಕರು ಸ್ಥಳೀಯ ಭಾಷೆಗಳನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು.
ಸಂಕ್ಷಿಪ್ತ ಭಾಷಣದಲ್ಲಿ ನ್ಯಾಬೊಂಗೊ, ಎಲ್ಲರನ್ನೂ ಒಗ್ಗೂಡಿಸುವ ವ್ಯಕ್ತಿಯಾಗುವುದಾಗಿ ಭರವಸೆ ನೀಡಿದರು. ರಾಜವಂಶದ ಉತ್ತರಾಧಿಕಾರವು ಕೇವಲ ಹಕ್ಕಲ್ಲ, ಅದೊಂದು ಕರ್ತವ್ಯವೂ ಹೌದು ಎಂದು ಅವರು ಹೇಳಿದರು. ‘ಪರಂಪರೆಗೆ ಶಿಸ್ತು ಮತ್ತು ಕಠಿಣ ಪರಿಶ್ರಮದ ಬೆಂಬಲವಿರಬೇಕು’ ಎಂದು ನ್ಯಾಬೊಂಗೊ ‘ನ್ಯೂ ವಿಷನ್’ ಪತ್ರಿಕೆಗೆ ತಿಳಿಸಿದ್ದಾರೆ.
ಉತ್ತರಾಧಿಕಾರದ ವಿವಾದ: ಉತ್ತರಾಧಿಕಾರದ ಸರತಿಯಲ್ಲಿ ನ್ಯಾಬೊಂಗೊ ಅವರ ಸ್ಥಾನ ಮೇಲ್ಮಟ್ಟದಲ್ಲಿರಲಿಲ್ಲ. ರಾಜ ಒಯೊ ನ್ಯಿಂಬಾ ಕಬಂಬಾ ಇಗುರು ರುಕಿಡಿ IV ಅವರು ಆಗಸ್ಟ್ ನಲ್ಲಿ 34ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಅವರಿಗೆ ಸಾರ್ವಜನಿಕವಾಗಿ ಗುರುತಿಸಲ್ಪಟ್ಟ ಯಾವುದೇ ಉತ್ತರಾಧಿಕಾರಿ ಇರಲಿಲ್ಲ ಎಂದು ವರದಿಯಾಗಿತ್ತು. ಬಳಿಕ ಆಡಳಿತಾರೂಢ ಬಾಬಿಟೊ ವಂಶದ ಹಿರಿಯರು ಅರ್ಹ ರಾಜಕುಮಾರರ ಪೈಕಿ ನ್ಯಾಬೊಂಗೊ ಅವರನ್ನು ಆಯ್ಕೆ ಮಾಡಿದರು.
ಆದರೆ, ರಾಜಮಾತೆ ಬೆಸ್ಟ್ ಕೆಮಿಗಿಸಾ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ರಾಜ ಒಯೊ ಅವರಿಗೆ ಒಬ್ಬ ಪುಟ್ಟ ಮಗನಿದ್ದು, ಆತನ ಗುರುತನ್ನು ‘ಸರಿಯಾದ ಸಮಯದಲ್ಲಿ’ ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
‘ಬೇಬಿ ಒಯೊ’ ಕುರಿತ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರ ನಡುವೆ ಚರ್ಚೆಗೆ ಕಾರಣವಾಗಿದೆ. ನ್ಯಾಬೊಂಗೊ ಅವರ ಪಟ್ಟಾಭಿಷೇಕದ ಸಿಂಧುತ್ವದ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿವೆ.






