ಉ.ಕೊರಿಯಾ: ಹೆಚ್ಚು ಮಕ್ಕಳನ್ನು ಪಡೆಯಲು ದೇಶದ ಮಹಿಳೆಯರಿಗೆ ಅಧ್ಯಕ್ಷರ ಕರೆ

Screen grab from video tweeted by @OliLondonTV
ಪ್ಯೋಂಗ್ಯಾಂಗ್: ದೇಶದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದರಿಂದ ಮಹಿಳೆಯರು ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಕರೆ ನೀಡಿದ್ದಾರೆ.
ರಾಜಧಾನಿ ಪ್ಯೋಂಗ್ಯಾಂಗ್ನಲ್ಲಿ `ರಾಷ್ಟ್ರೀಯ ತಾಯಂದಿರ ವೇದಿಕೆ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಜನನ ದರದ ಕುಸಿತವನ್ನು ತಡೆಗಟ್ಟುವುದು ಮತ್ತು ಉತ್ತಮ ಶಿಶುಪಾಲನೆ ಮನೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಕರ್ತವ್ಯವಾಗಿದೆ ಮತ್ತು ಇದನ್ನು ಸೂಕ್ತರೀತಿಯಲ್ಲಿ ನಿಭಾಯಿಸಬೇಕಿದೆ. ರಾಷ್ಟ್ರದ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಪಕ್ಷ ಮತ್ತು ದೇಶದ ಕೆಲಸವನ್ನು ನಿರ್ವಹಿಸಲು ಕಷ್ಟವಾದಾಗ ನಾನು ಯಾವತ್ತೂ ತಾಯಂದಿರ ಬಗ್ಗೆ ಯೋಚಿಸುತ್ತೇನೆ' ಎಂದು ಹೇಳುವಾಗ ಗದ್ಗದಿತರಾಗಿ ಕಣ್ಣೀರು ಒರೆಸಿಕೊಳ್ಳುವ ವೀಡಿಯೊವನ್ನು ಟಿವಿ ಚಾನೆಲ್ಗಳು ಪ್ರಸಾರ ಮಾಡಿವೆ.
ಇತ್ತೀಚಿನ ದಿನಗಳಲ್ಲಿ ಫಲವತ್ತತೆಯ ಪ್ರಮಾಣದಲ್ಲಿ ತೀವ್ರ ಕುಸಿತದ ನಡುವೆಯೂ ಉತ್ತರ ಕೊರಿಯಾದಲ್ಲಿ ಫಲವತ್ತತೆಯ ದರ 1.8ರಷ್ಟಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿ ಹೇಳಿದೆ. ಸುಮಾರು 25 ದಶಲಕ್ಷ ಜನಸಂಖ್ಯೆ ಹೊಂದಿರುವ ಉತ್ತರ ಕೊರಿಯಾ 1990ರ ದಶಕದ ಮಾರಣಾಂತಿಕ ಬರಗಾಲ ಹಾಗೂ ಆ ಬಳಿಕ ಸಂಭವಿಸಿದ ಸರಣಿ ಪ್ರಾಕೃತಿಕ ವಿಕೋಪದ ಕಾರಣ ಗಂಭೀರ ಪ್ರಮಾಣದ ಆಹಾರದ ಕೊರತೆ ಎದುರಿಸುತ್ತಿದೆ.







