ಮಾಡದ ತಪ್ಪಿಗೆ 17 ವರ್ಷ ಜೈಲಿನಲ್ಲಿದ್ದ ವ್ಯಕ್ತಿ ಬಿಡುಗಡೆ

ಲಂಡನ್: ಅತ್ಯಾಚಾರ ಮಾಡಿದ ಆರೋಪದಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟು ಕಳೆದ 17 ವರ್ಷದಿಂದ ಜೈಲಿನಲ್ಲಿದ್ದ ವ್ಯಕ್ತಿ ನಿರ್ದೋಷಿ ಎಂದು ಕಂಡುಬಂದ ಬಳಿಕ ಆತನನ್ನು ಬುಧವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ಬ್ರಿಟನ್‍ನ ಮಾಧ್ಯಮಗಳು ವರದಿ ಮಾಡಿವೆ.
ಸಲ್ಫೋರ್ಡ್ ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬ್ರಿಟನ್ ಪ್ರಜೆ ಆಂಡ್ರಿವ್ ಮಲ್ಕಿನ್ಸನ್‍ನ ಅಪರಾಧ ಸಾಬೀತಾಗಿದೆ ಎಂದು 2004ರಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿತ್ತು. ಆದರೆ ತಾನು ಅಪರಾಧಿಯಲ್ಲ ಎಂದು ಪದೇ ಪದೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಮಲ್ಕಿನ್ಸನ್ ಕಳೆದ ಜನವರಿಯಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ. ಅದರಂತೆ ಡಿಎನ್‍ಎ ಪರೀಕ್ಷೆಯಲ್ಲಿ ಮಲ್ಕಿನ್ಸನ್ ನಿರ್ದೋಷಿ ಎಂದು ವರದಿ ಬಂದ ಕಾರಣ ಆತನನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
`ಮಾಡದ ತಪ್ಪಿಗೆ 17 ವರ್ಷ ಜೈಲಿನಲ್ಲಿದ್ದೆ. ನನ್ನ ಜೀವನದ ಅಮೂಲ್ಯ 17 ವರ್ಷಗಳು ಜೈಲಿನ ನಾಲ್ಕು ಗೋಡೆಗಳ ನಡುವೆ ವ್ಯರ್ಥವಾಗಿದೆ. ಕಳೆದ 17 ವರ್ಷ ನನ್ನನ್ನು ಸರಕಾರ ಅಪಹರಿಸಿತ್ತು' ಎಂದು ಇದೀಗ 57 ವರ್ಷವಾಗಿರುವ ಆಂಡ್ರಿವ್ ಮಲ್ಕಿನ್ಸನ್ ಹೇಳಿಕೆ ನೀಡಿದ್ದಾರೆ.





