ಮಾಡದ ಅಪರಾಧಕ್ಕೆ 13 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಕೊನೆಗೂ ದೋಷಮುಕ್ತಿ

ಬರ್ಲಿನ್: ಹಿರಿಯ ಮಹಿಳೆಯೊಬ್ಬರ ಶಂಕಿತ ಕೊಲೆಗೆ 13 ವರ್ಷಕ್ಕೂ ಅಧಿಕ ಸಮಯ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಜರ್ಮನ್ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿದೆ.
2008ರಲ್ಲಿ ತಾನು ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 87 ವರ್ಷದ ಮಹಿಳೆಯೊಬ್ಬಳ ಜತೆ ಮಾತಿನ ಚಕಮಕಿ ನಡೆಸಿದ್ದ ಮ್ಯಾನ್ಫ್ರೆಡ್ ಜೆಂಡಿಝ್ಕಿ ಎಂಬಾತ ಮಹಿಳೆಯನ್ನು ಬಾತ್ಟಬ್ನಲ್ಲಿ ಮುಳುಗಿಸಿ ಹತ್ಯೆ ಮಾಡಿರುವುದಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ತಾನು ನಿರ್ದೋಷಿ ಎಂದು ಜೆಂಡಿರ್ಕ್ ನಿರಂತರ ವಾದಿಸುತ್ತಿದ್ದರೂ ಆತನಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿತ್ತು.
ಈ ಮಧ್ಯೆ, ಮೇಲ್ಮನವಿಯ ವಿಚಾರಣೆ ಸುದೀರ್ಘ ಕಾಲ ನಡೆದಿದ್ದು ಅಂತಿಮವಾಗಿ ‘ಇದು ಕೊಲೆಯಲ್ಲ. ಮಹಿಳೆ ಆಕಸ್ಮಿಕವಾಗಿ ಮೃತಪಟ್ಟಿರುವುದು ಸಾಬೀತಾಗಿದೆ. ಆದ್ದರಿಂದ ಜೆಂಡಿರ್ಕ್ ನಿರಪರಾಧಿ’ ಎಂದು ತೀರ್ಪು ನೀಡಿದ ನ್ಯಾಯಾಲಯ ಆತನನ್ನು ದೋಷಮುಕ್ತಗೊಳಿಸಿದೆ. ಜತೆಗೆ ಸುಮಾರು 4 ಲಕ್ಷ ಡಾಲರ್ನಷ್ಟು ಪರಿಹಾರ ನೀಡುವಂತೆ ಸೂಚಿಸಿದೆ.
ಇದೀಗ 63 ವರ್ಷವಾಗಿರುವ ಜೆಂಡಿರ್ಕ್ , ನ್ಯಾಯಾಲಯದ ತೀರ್ಪಿನ ಬಳಿಕ ನಿರಾಳರಾಗಿದ್ದರು. ಆದರೆ ಅನ್ಯಾಯವಾಗಿ 4,915 ದಿನಗಳನ್ನು ಜೈಲಿನೊಳಗೆ ಕಳೆದಿರುವುದು ನಿಜಕ್ಕೂ ಒಂದು ದುರಂತವಾಗಿದೆ ಎಂದವರು ಪ್ರತಿಕ್ರಿಯಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.