ಗಾಝಾ, ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ | ಆಸಿಯಾನ್ ಶೃಂಗಸಭೆ ಆಗ್ರಹ
PC : PTI
ವಿಯೆಂಟಿಯಾನ್ : ಗಾಝಾ ಮತ್ತು ಉಕ್ರೇನ್ನಹಲ್ಲಿ ಮುಂದುವರಿದಿರುವ ಘರ್ಷಣೆಗೆ ಶಾಂತಿಯುತ ಪರಿಹಾರ ರೂಪಿಸಬೇಕು ಎಂದು ಆಸಿಯಾನ್ ಶೃಂಗಸಭೆ ಆಗ್ರಹಿಸಿದ್ದು ಇಲ್ಲಿ ಮುಂದುವರಿದಿರುವ ಭೀಕರ ಮಾನವೀಯ ಪರಿಸ್ಥಿತಿ ಮತ್ತು ಆತಂಕಕಾರಿ ಸಾವುನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಲಾವೋಸ್ನತಲ್ಲಿ ನಡೆದ ಆಗ್ನೇಯ ಏಶ್ಯಾ ಪ್ರಾದೇಶಿಕ ಒಕ್ಕೂಟ ಆಸಿಯಾನ್ನೀ ವಿದೇಶಾಂಗ ಸಚಿವರ ಎರಡು ದಿನಗಳ ಶೃಂಗಸಭೆಯ ಅಂತ್ಯದಲ್ಲಿ ಹೊರಡಿಸಲಾದ ನಿರ್ಣಯದಲ್ಲಿ ಗಾಝಾ, ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರಕ್ಕೆ ಕ್ರಮ, ಮಿಲಿಟರಿ ಆಡಳಿತದ ಮ್ಯಾನ್ಮಾರ್ನಗಲ್ಲಿ ನಾಗರಿಕರ ವಿರುದ್ಧದ ಹಿಂಸಾಚಾರಕ್ಕೆ ಖಂಡನೆ, ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಉದ್ವಿಗ್ನತೆ ತಗ್ಗಿಸಲು ಕ್ರಮ ಹಾಗೂ ತಪ್ಪು ಲೆಕ್ಕಾಚಾರದಿಂದ ಅನಾಹುತ ಸಂಭವಿಸದಂತೆ ತಡೆಯಲು ಆಗ್ರಹಿಸಲಾಗಿದೆ.
ಶನಿವಾರ ನಡೆದ ಸರಣಿ ಸಭೆಗಳಲ್ಲಿ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರು ಹಾಗೂ ಆಸಿಯಾನ್ನ ಮಿತ್ರದೇಶಗಳಾದ ಅಮೆರಿಕ, ಚೀನಾ, ರಶ್ಯಾ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾಗಳ ಪ್ರತಿನಿಧಿಗಳು ಪಾಲ್ಗೊಂಡು ಪ್ರಮುಖ ಭದ್ರತಾ ವಿಷಯಗಳು ಮತ್ತು ಇತರ ಪ್ರಾದೇಶಿಕ ವ್ಯವಹಾರಗಳ ಬಗ್ಗೆ ಚರ್ಚಿಸಿದರು.
ಅಮೆರಿಕದ ವಿದೇಶಾಂಗ ಸಚಿವ ಅಂಟೊನಿ ಬ್ಲಿಂಕೆನ್ ಜತೆಗಿನ ಸಭೆಯ ಬಳಿಕ ಮಾತನಾಡಿದ ಇಂಡೊನೇಶ್ಯಾದ ವಿದೇಶಾಂಗ ಸಚಿವೆ ರೆಟ್ನೊ ಮರ್ಸುದಿ `ಅಮೆರಿಕ- ಆಸಿಯಾನ್ ನಡುವಿನ ಉತ್ತಮ ಪಾಲುದಾರಿಕೆಯು ಜಾಗತಿಕ ಶಾಂತಿಗೆ ಕೊಡುಗೆ ನೀಡಬೇಕು' ಎಂದರು. ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಆಸಿಯಾನ್ ಸದಸ್ಯರಾದ ವಿಯೆಟ್ನಾಮ್, ಫಿಲಿಪ್ಪೀನ್ಸ್, ಮಲೇಶ್ಯಾ ಮತ್ತು ಬ್ರೂನೈ ದೇಶಗಳು ಹಾಗೂ ಚೀನಾದ ನಡುವೆ ವಿವಾದವಿದೆ. ವಿಶ್ವದ ಪ್ರಮುಖ ಜಲಸಾರಿಗೆ ಮಾರ್ಗವಾಗಿರುವ ದಕ್ಷಿಣ ಚೀನಾ ಸಮುದ್ರ ಪ್ರದೇಶದ ಬಹುತೇಕ ಪೂರ್ಣಭಾಗದ ಮೇಲೆ ಚೀನಾ ಸಾರ್ವಭೌಮತ್ವದ ಹಕ್ಕನ್ನು ಪ್ರತಿಪಾದಿಸುತ್ತಿದೆ.
ಶುಕ್ರವಾರ ಫಿಲಿಪ್ಪೀನ್ಸ್ ವಿದೇಶಾಂಗ ಕಾರ್ಯದರ್ಶಿ ಎನ್ರಿಕ್ ಮನಾಲೊ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ನಡೆದ ಸಭೆಯಲ್ಲಿ `ಪರಸ್ಪರ ಪ್ರಾದೇಶಿಕ ಪ್ರತಿಪಾದನೆಯನ್ನು ಬಿಟ್ಟುಕೊಡದೆ, ವಿವಾದಿತ ಪ್ರದೇಶಕ್ಕೆ ಪರಸ್ಪರ ಸ್ವೀಕಾರಾರ್ಹ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ಘರ್ಷಣೆಯನ್ನು ಅಂತ್ಯಗೊಳಿಸುವ' ಒಪ್ಪಂದಕ್ಕೆ ಬರಲಾಗಿದೆ. ಅದರಂತೆ ಶನಿವಾರ ದಕ್ಷಿಣ ಚೀನಾ ಸಮುದ್ರ ಪ್ರದೇಶದ ವಿವಾದಿತ ಪ್ರದೇಶಕ್ಕೆ ಸರಕುಗಳನ್ನು ಯಾವುದೇ ತಡೆಯಿಲ್ಲದೆ ಪೂರೈಸಲಾಗಿದೆ ಎಂದು ಫಿಲಿಪ್ಪೀನ್ಸ್ ಸರಕಾರ ಹೇಳಿದೆ. ಇದು ಉತ್ತಮ ಬೆಳವಣಿಗೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.
ಫಿಲಿಪ್ಪೀನ್ಸ್ ನಲ್ಲಿ ಅಮೆರಿಕದ ಮಧ್ಯಂತರ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿರುವುದು ಪ್ರಾದೇಶಿಕ ಉದ್ವಿಗ್ನತೆಯನ್ನು ಸೃಷ್ಟಿಸಲಿದೆ ಮತ್ತು ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣವಾಗಲಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ಯಿನ ಅಸಮಾಧಾನ ಸೂಚಿಸಿದ್ದಾರೆ ಎಂದು ವರದಿಯಾಗಿದೆ.