ʼಜನರ ತೆರಿಗೆ ಹಣ ಬೇರೆಯವರ ಮಕ್ಕಳ ಮೇಲೆ ಬಾಂಬ್ ಹಾಕಲು ಬಳಕೆಯಾಗಬಾರದು’: ವಿಜಯೋತ್ಸವ ಭಾಷಣದಲ್ಲಿ ನೂತನ ಸೆನೆಟರ್ ಅಬ್ದುಲ್ ಅಲ್-ಸಯೀದ್

ಮಿಷಿಗನ್: ಅಮೆರಿಕದ ಜನರು ಪಾವತಿಸುವ ತೆರಿಗೆ ಹಣವನ್ನು ಇತರ ದೇಶಗಳ ಜನರ ಮೇಲೆ, ಅವರ ಮಕ್ಕಳ ಮೇಲೆ ಬಾಂಬ್ ದಾಳಿ ನಡೆಸಲು ಬಳಸಬಾರದು. ಬದಲಾಗಿ, ಆ ಹಣವನ್ನು ತೆರಿಗೆ ಪಾವತಿಸುವ ಜನರ ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ ಖರ್ಚು ಮಾಡಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಅಲ್-ಸಯೀದ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಮಿಷಿಗನ್ ನಲ್ಲಿ ನಡೆದ ತೀವ್ರ ಪೈಪೋಟಿಯ ಅಮೆರಿಕ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ ಬಳಿಕ ವಿಜಯೋತ್ಸವದ ಭಾಷಣದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
‘ಅಮೆರಿಕದ ಶ್ರೇಷ್ಠತೆ ಇರುವುದು ನಮ್ಮ ನ್ಯೂನತೆಗಳನ್ನು ಕಡೆಗಣಿಸುವುದರಲ್ಲಿ ಇಲ್ಲ. ಬದಲಾಗಿ, ಆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಧೈರ್ಯ ತೋರುವುದರಲ್ಲಿ ಅಡಗಿದೆ’ ಎಂದು ಅಲ್-ಸಯೀದ್ ಹೇಳಿದರು.
‘ಮಿಷಿಗನ್ ನ ಜನರೇ, ಜೀವನ ಇಷ್ಟೊಂದು ಕಷ್ಟಕರವಾಗಿರಬಾರದು. ದಿನಸಿ ಸಾಮಗ್ರಿಗಳನ್ನು ಖರೀದಿಸುವುದು ಅಥವಾ ವಾಹನಕ್ಕೆ ಇಂಧನ ತುಂಬಿಸುವುದೇ ಕಷ್ಟದ ಕೆಲಸವಾಗಬಾರದು. ಸ್ವಂತ ಮನೆ ಹೊಂದುವುದೂ ಇಷ್ಟೊಂದು ಕಷ್ಟಕರವಾಗಿರಬಾರದು’ ಎಂದು ಅವರು ಹೇಳಿದರು.
‘ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ದೇಶದಲ್ಲಿ ವೈದ್ಯರನ್ನು ಭೇಟಿ ಮಾಡುವುದಕ್ಕೂ ಜನರು ಇಷ್ಟೊಂದು ಕಷ್ಟಪಡುವಂತಾಗಬಾರದು’ ಎಂದು ಹೇಳಿದರು.
ತೆರಿಗೆ ಹಣದ ಬಳಕೆಯ ಕುರಿತು ಮಾತನಾಡಿದ ಅವರು, ‘ನೀವು ತೆರಿಗೆ ಪಾವತಿಸುವಾಗ, ಆ ಹಣವು ಬೇರೆಯವರ ಮೇಲೆ ಅಥವಾ ಅವರ ಮಕ್ಕಳ ಮೇಲೆ ಬಾಂಬ್‌ಗಳನ್ನು ಹಾಕಲು ಬಳಕೆಯಾಗುವ ಬದಲು, ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗಾಗಿ ಖರ್ಚಾಗುತ್ತದೆ ಎಂಬ ಖಾತ್ರಿ ಇರಬೇಕು. ಇಂತಹ ಖಾತ್ರಿಯನ್ನು ಹೊಂದುವುದೇ ಇಷ್ಟೊಂದು ಕಷ್ಟಕರವಾಗಿರಬಾರದು’ ಎಂದರು.






