ಪರಮಾಣು ಅಸ್ತ್ರಗಳ ನಿರ್ಮೂಲನೆ: ಹಿರೋಷಿಮಾ ಮೇಯರ್ ಆಗ್ರಹ

Photo : ಫ್ಯೂಮಿಯೋ ಕಿಶಿಡಾ, ಕಝುಮಿ ಮತ್ಸುಯಿ | TWITTER
ಟೋಕಿಯೊ, ಆ.6: ಜಪಾನ್ನ ಹಿರೋಷಿಮಾ ನಗರದ ಮೇಲೆ ಅಮೆರಿಕದ ಪರಮಾಣು ಬಾಂಬ್ ದಾಳಿಯ 78ನೇ ವಾರ್ಷಿಕ ದಿನದ ಸಂದರ್ಭ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರೋಷಿಮಾ ಮೇಯರ್ ಕಝುಮಿ ಮತ್ಸುಯಿ ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆಗೆ ಜಾಗತಿಕ ಸಮುದಾಯ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ನೀತಿ ನಿರೂಪಕರು ಕಳವಳ ವ್ಯಕ್ತಪಡಿಸಿರುವ ಪರಮಾಣು ಬೆದರಿಕೆಗಳು ಪರಮಾಣು ತಡೆಗಟ್ಟುವಿಕೆ ಸಿದ್ಧಾಂತದ ಮೂರ್ಖತನವನ್ನು ಹೊರಗೆಡವಿದೆ ಎಂಬ ವಾಸ್ತವವನ್ನು ವಿಶ್ವದ ಮುಖಂಡರು ಅರಿತುಕೊಳ್ಳಬೇಕಿದೆ ಎಂದವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಪಾನ್ ಪ್ರಧಾನಿ ಫುಮಿಯೊ ಕಿಷಿಡ ` ರಶ್ಯದ ಪರಮಾಣು ಬೆದರಿಕೆಯಿಂದಾಗಿ ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ಜಗತ್ತಿಗೆ ಹಾದಿಯು ಕಠಿಣವಾಗುತ್ತಿದೆ. ಆದರೆ ಇದು ಆ ಗುರಿಯತ್ತ ಅಂತರಾಷ್ಟ್ರೀಯ ಆವೇಗವನ್ನು ಮರಳಿ ತರಲು ಹೆಚ್ಚು ಮಹತ್ವದ್ದಾಗಿದೆ' ಎಂದರು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ನೀಡಿದ ಸಂದೇಶವನ್ನು ಓದಿ ಹೇಳಲಾಯಿತು. `ವಿಶ್ವ ನಾಯಕರು ಈ ನಗರಕ್ಕೆ ಭೇಟಿ ನೀಡಿದ್ದಾರೆ, ಇಲ್ಲಿನ ಸ್ಮಾರಕಗಳನ್ನು ನೋಡಿದ್ದಾರೆ ಮತ್ತು ಪರಮಾಣು ನಿಶ್ಯಸ್ತ್ರೀಕರಣದ ಉಪಕ್ರಮದ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯವಾಗಬೇಕಿದೆ, ಯಾಕೆಂದರೆ ಪರಮಾಣು ಯುದ್ಧದ ಮೃದಂಗ ಮತ್ತೆ ಸದ್ದು ಮಾಡುತ್ತಿದೆ' ಎಂದು ಗುಟೆರಸ್ ಹೇಳಿದ್ದಾರೆ.
ಎರಡನೇ ವಿಶ್ವಯುದ್ಧದ ಸಂದರ್ಭ, 1945ರ ಆಗಸ್ಟ್ 6ರಂದು ಅಮೆರಿಕವು ಜಪಾನ್ನ ಹಿರೋಷಿಮದ ಮೇಲೆ ಬಾಂಬ್ ದಾಳಿ ನಡೆಸಿದಾಗ ಸಾವಿರಾರು ಮಂದಿ ಮೃತಪಟ್ಟಿದ್ದರು. ಆಗಸ್ಟ್ 15ರಂದು ಜಪಾನ್ ಶರಣಾಗಿತ್ತು. ಬಾಂಬ್ ದಾಳಿಯ ವಾರ್ಷಿಕ ದಿನದ ಅಂಗವಾಗಿ ರವಿವಾರ ಬೆಳಿಗ್ಗೆ 8:15ಕ್ಕೆ ಹಿರೋಷಿಮಾದಲ್ಲಿ ಶಾಂತಿಯ ಗಂಟೆ ಬಾರಿಸಲಾಯಿತು(ಬಾಂಬ್ ಬಿದ್ದ ಸಮಯಕ್ಕೆ ಸರಿಯಾಗಿ). ಹೊರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 50,000 ಜನರು ಮೃತಪಟ್ಟವರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಿದರು ಎಂದು ವರದಿಯಾಗಿದೆ.







