ದೊಡ್ಡ ಪ್ರಮಾಣದ ಕೈದಿಗಳ ವಿನಿಮಯಕ್ಕೆ ರಶ್ಯ–ಉಕ್ರೇನ್ ಒಪ್ಪಿಗೆ
ಮಹತ್ವದ ಪ್ರಗತಿಯಿಲ್ಲದೆ ಅಬುಧಾಬಿ ಶಾಂತಿ ಮಾತುಕತೆ ಅಂತ್ಯ

Photo Credit : @AP
ಅಬುಧಾಬಿ, ನ. 11: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಬುಧಾಬಿಯಲ್ಲಿ ರಶ್ಯ ಮತ್ತು ಉಕ್ರೇನ್ ನಡುವೆ ನಡೆದ ಎರಡು ದಿನಗಳ ಶಾಂತಿ ಮಾತುಕತೆಯಲ್ಲಿ ಕೈದಿಗಳ ವಿನಿಮಯಕ್ಕೆ ಒಪ್ಪಿಗೆ ದೊರೆತಿರುವುದು ಏಕೈಕ ಸ್ಪಷ್ಟ ಫಲಿತಾಂಶವಾಗಿದೆ. ಆದರೆ, ಕದನ ವಿರಾಮ ಅಥವಾ ಪ್ರಾದೇಶಿಕ ವಿವಾದಗಳ ಕುರಿತು ಯಾವುದೇ ಮಹತ್ವದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಅಮೆರಿಕದ ಪ್ರತಿನಿಧಿ ಜೇರೆಡ್ ಕುಶ್ನರ್ ಬುಧವಾರ ಅಬುಧಾಬಿಯಲ್ಲಿ ಈ ಒಪ್ಪಂದವನ್ನು ಘೋಷಿಸಿದರು. ಮಾತುಕತೆಯ ಧನಾತ್ಮಕ ಅಂಶವೆಂದರೆ, ಅತ್ಯಂತ ದೊಡ್ಡ ಮಾನವೀಯ ನೆಲೆಯಲ್ಲಿ ಕೈದಿಗಳ ಬಿಡುಗಡೆಗೆ ಒಪ್ಪಿಕೊಂಡಿರುವುದು. ವಿನಿಮಯ ಮಾಡಿಕೊಳ್ಳಬೇಕಾದ ಕೈದಿಗಳ ಅಂತಿಮ ಸಂಖ್ಯೆಯನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಕುಶ್ನರ್ ಹೇಳಿದರು.
ಉಕ್ರೇನ್ ನ ಮುಖ್ಯ ಸಂಧಾನಕಾರ ರಸ್ಟೆಮ್ ಉಮೆರೊವ್ ಮತ್ತು ರಶ್ಯದ ಪ್ರತಿನಿಧಿ ವ್ಲಾಡಿಮಿರ್ ಮೆಡಿನ್ಸ್ಕಿ ಕೂಡ ಯೋಜಿತ ವಿನಿಮಯವನ್ನು ದೃಢಪಡಿಸಿದ್ದಾರೆ. ಆದರೆ, ಎರಡೂ ಕಡೆಯವರು ಇದರ ಸಮಯ ಅಥವಾ ಪ್ರಮಾಣದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಪ್ರತಿಯೊಂದು ಕಡೆಯಿಂದ 1,000 ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಸಂಖ್ಯೆ 1,500ಕ್ಕೆ ಏರುವ ಸಾಧ್ಯತೆಯಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ತಿಳಿಸಿದ್ದರು.
ಫೆಬ್ರವರಿಯಲ್ಲಿ ಜಿನೀವಾದಲ್ಲಿ ನಡೆದ ಮಾತುಕತೆ ವಿಫಲವಾದ ಬಳಿಕ ಉಕ್ರೇನ್ ಮತ್ತು ರಶ್ಯ ನಡುವೆ ನಡೆದ ಮಾತುಕತೆಯಲ್ಲಿ ಕೈದಿಗಳ ವಿನಿಮಯಕ್ಕೆ ಒಪ್ಪಿಗೆ ದೊರೆತಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಉಕ್ರೇನ್ ನ ನಿಯಂತ್ರಣದಲ್ಲಿರುವ ಪೂರ್ವ ಡೊನ್ಬಾಸ್ ಪ್ರದೇಶದಿಂದ ಉಕ್ರೇನ್ ಹಿಂತೆಗೆದುಕೊಳ್ಳಬೇಕೆಂದು ರಶ್ಯ ತನ್ನ ಪಟ್ಟು ಮುಂದುವರಿಸಿದೆ. ಆದರೆ, ಪ್ರಾದೇಶಿಕ ನಿರ್ಧಾರಗಳನ್ನು ನಾಯಕರ ಮಟ್ಟದಲ್ಲಿ ಪರಿಹರಿಸಬೇಕು ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ.
ಸಮರಪೀಡಿತ ಪ್ರದೇಶದಲ್ಲಿ ತಕ್ಷಣದ ಕದನ ವಿರಾಮದ ಕರೆಗಳನ್ನು ರಶ್ಯ ತಿರಸ್ಕರಿಸಿದ್ದು, ಶತ್ರುತ್ವವನ್ನು ನಿಲ್ಲಿಸಲು ಒಪ್ಪಿಕೊಳ್ಳುವ ಮೊದಲು ವ್ಯಾಪಕವಾದ ಭದ್ರತಾ ವ್ಯವಸ್ಥೆಗಳಿಗೆ ಒತ್ತಾಯಿಸಿದೆ.
ಉಕ್ರೇನಿಯನ್ ಮತ್ತು ಅಮೆರಿಕನ್ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಮಾಲೋಚನೆಗಾಗಿ ಯುರೋಪಿಯನ್ ಪ್ರತಿನಿಧಿಗಳು ಅಬುಧಾಬಿಯಲ್ಲಿ ಉಪಸ್ಥಿತರಿದ್ದರು. ಆದರೆ, ಅವರು ತ್ರಿಪಕ್ಷೀಯ ಮಾತುಕತೆಗಳಲ್ಲಿ ನೇರವಾಗಿ ಭಾಗವಹಿಸಲಿಲ್ಲ.
ತಮ್ಮ ನಿಯೋಗವು ಯುರೋಪಿಯನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿಲ್ಲ. ಯುರೋಪಿಯನ್ ದೇಶಗಳಿಂದ ಯಾವುದೇ ನಿರ್ದಿಷ್ಟ ಶಾಂತಿ ಉಪಕ್ರಮಗಳು ಅಥವಾ ಪ್ರಸ್ತಾಪಗಳು ರಶ್ಯಕ್ಕೆ ಬಂದಿಲ್ಲ. ಅವರೊಂದಿಗೆ ಚರ್ಚಿಸಲು ಏನಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ರಶ್ಯದ ಮುಖ್ಯ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದಾರೆ.
ಬುಧವಾರ ಯುರೋಪಿಯನ್ ಪಾಲುದಾರರೊಂದಿಗೆ ಉಕ್ರೇನ್ ನ ನಿಯೋಗವು ಹೆಚ್ಚಿನ ಚರ್ಚೆಗಳನ್ನು ನಡೆಸಿದೆ ಎಂದು ಉಮೆರೊವ್ ತಿಳಿಸಿದ್ದಾರೆ. ಯುರೋಪ್ ಖಂಡದ ಭವಿಷ್ಯದ ಭದ್ರತಾ ವ್ಯವಸ್ಥೆಗಳ ಕುರಿತು ಚರ್ಚೆಗಳು ವಿಸ್ತರಿಸುವುದರಿಂದ ಯುರೋಪಿಯನ್ ದೇಶಗಳು ಅಂತಿಮವಾಗಿ ಮಾತುಕತೆಗಳಿಗೆ ಸೇರ್ಪಡೆಗೊಳ್ಳಬೇಕು ಎಂದು ಅಮೆರಿಕ ಸೂಚಿಸಿದೆ.
► ಅಮೆರಿಕ ಪ್ರತಿನಿಧಿಗಳು ರಶ್ಯಕ್ಕೆ ಪಯಣ
ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ತಾನು ಮತ್ತು ಸ್ಟೀವ್ ವಿಟ್ಕಾಫ್ ಗುರುವಾರ ಮಾಸ್ಕೋಗೆ ಪ್ರಯಾಣಿಸುವುದಾಗಿ ಕುಶ್ನರ್ ತಿಳಿಸಿದ್ದಾರೆ. ಅದಾದ ನಂತರ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಅವರು ಡಬ್ಲಿನ್ ಗೆ ತೆರಳಲಿದ್ದಾರೆ.
ಝೆಲೆನ್ಸ್ಕಿ ಮತ್ತು ಪುಟಿನ್ ಹೆಚ್ಚಿನ ಮಾತುಕತೆಗಾಗಿ ಮುಖಾಮುಖಿ ಭೇಟಿಯಾಗುವುದು ಉತ್ತಮವಾಗಿರುತ್ತದೆ ಎಂಬುದು ತಮ್ಮ ಅಭಿಪ್ರಾಯ. ಆದರೆ, ಅದು ಸಂಭವಿಸುವ ಮೊದಲು ಹೆಚ್ಚಿನ ಪ್ರಗತಿಯನ್ನು ಕಾಣಲು ಬಯಸುವುದಾಗಿ ರಶ್ಯನ್ನರು ಹೇಳಿದ್ದಾರೆ ಎಂದು ಕುಶ್ನರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.






