ದಕ್ಷಿಣ ಆಫ್ರಿಕಾ | ಮಿನಿಬಸ್–ಟ್ರಕ್ ಅಪಘಾತದಲ್ಲಿ 11 ಮಂದಿ ಮೃತ್ಯು: ಒಂದೇ ವಾರದಲ್ಲಿ ಎರಡನೇ ಘಟನೆ

Photo Credit : X \ indiatoday.in
ಕೇಪ್ ಟೌನ್: ಗುರುವಾರ ದಕ್ಷಿಣ ಆಫ್ರಿಕಾದ ಪೂರ್ವ ಕ್ವಾಝುಲು–ನತಾಲ್ ಪ್ರಾಂತ್ಯದಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ಹಾಗೂ ತುರ್ತು ಸೇವೆಗಳು ತಿಳಿಸಿವೆ. ಶಾಲಾ ಮಕ್ಕಳನ್ನು ಒಳಗೊಂಡಿದ್ದ ಮತ್ತೊಂದು ಮಾರಣಾಂತಿಕ ಅಪಘಾತ ಸಂಭವಿಸಿದ ಕೇವಲ ಒಂದೇ ವಾರದ ಅಂತರದಲ್ಲಿ ಈ ಭೀಕರ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲೇ ಶಾಲಾ ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಸಾರಿಗೆ ಅಧಿಕಾರಿ ಸಿಬೊನಿಸೊ ಡೂಮಾ ತಿಳಿಸಿದ್ದಾರೆ.
ಈ ಅಪಘಾತದಲ್ಲಿ 11 ಮಂದಿ ಮೃತಪಟ್ಟು, ಅವಶೇಷಗಳಡಿ ಸಿಲುಕಿದ್ದ ಮಿನಿಬಸ್ನ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖಾಸಗಿ ಅರೆವೈದ್ಯಕೀಯ ಸೇವಾ ಸಂಸ್ಥೆ ಎಎಲ್ಎಸ್ ಪ್ಯಾರಾಮೆಡಿಕ್ಸ್ನ ವಕ್ತಾರ ಗ್ಯಾರಿತ್ ಜಾಮೀಸನ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ನೈರುತ್ಯ ಜೊಹಾನ್ಸ್ಬರ್ಗ್ನಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 14 ಶಾಲಾ ಮಕ್ಕಳು ಮೃತಪಟ್ಟ ಘಟನೆ ನಡೆದಿದ್ದು, ಅದಾದ ನಂತರ ಒಂದೇ ವಾರದೊಳಗೆ ಸಂಭವಿಸಿದ ಎರಡನೇ ರಸ್ತೆ ಅಪಘಾತ ಇದಾಗಿದೆ.







