ಅಫ್ಘಾನ್ ಗಡಿ ಬಂದ್: ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಶೇ. 400ರಷ್ಟು ಏರಿಕೆ

PC: x.com/ReutersWorld
ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಮುಚ್ಚಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಎರಡು ದೇಶಗಳ ನಡುವೆ ಈ ತಿಂಗಳ ಆರಂಭದಲ್ಲಿ ಶುರುವಾದ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ಬೆಲೆಗೆ ಹೋಲಿಸಿದರೆ ಟೊಮ್ಯಾಟೊ ಬೆಲೆ ಐದು ಪಟ್ಟು ಆಗಿದೆ.
ಪಾಕಿಸ್ತಾನದ ವಾಯುದಾಳಿಯಲ್ಲಿ ಹತ್ತಾರು ಮಂದಿ ಮೃತಪಟ್ಟ ಬೆನ್ನಲ್ಲೇ ಅಕ್ಟೋಬರ್ 11ರಿಂದ ಉಭಯ ದೇಶಗಳ ನಡುವಿನ ಗಡಿ ಮುಚ್ಚಲಾಗಿತ್ತು. ಇದು ತಾಲಿಬಾನ್ 2021ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.
ಸಂಘರ್ಷದ ಹಿನ್ನೆಲೆಯಲ್ಲಿ ಗಡಿ ಮುಚ್ಚಿರುವುದರಿಂದ ಎಲ್ಲ ಅಗತ್ಯ ವಸ್ತುಗಳ ಸಾಗಾಣಿಕೆಗೆ ತಡೆ ಉಂಟಾಗಿದೆ ಎಂದು ಪಾಕ್- ಅಫ್ಘಾನ್ ಚೇಂಬರ್ ಆಫ್ ಕಾಮರ್ಸ್ ಮಖ್ಯಸ್ಥ ಖಾನ್ ಜನ್ ಅಲೋಕೋಝಿ ಹೇಳಿದ್ದಾರೆ. ಪ್ರತಿ ದಿನ ಉಭಯ ದೇಶಳು 10 ಲಕ್ಷ ಡಾಲರ್ ಕಳೆದುಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳ ನಡುವಿನ ವಾರ್ಷಿಕ 2.3 ಶತಕೋಟಿ ಡಾಲರ್ ವಹಿವಾಟಿನಲ್ಲಿ ತಾಜಾ ಹಣ್ಣುಗಳು, ತರಕಾರಿ, ಖನಿಜಗಳು, ಔಷಧಿ, ಗೋಧಿ, ಅಕ್ಕಿ, ಸಕ್ಕರೆ, ಮಾಂಸ ಮತ್ತು ಹೈನು ಉತ್ಪನ್ನಗಳು ಪ್ರಮುಖವಾಗಿವೆ.
ಪಾಕಿಸ್ತಾನದಲ್ಲಿ ಅಡುಗೆಗೆ ವ್ಯಾಪಕವಾಗಿ ಬಳಸಲಾಗುವ ಟೊಮ್ಯಾಟೊ ಬೆಲೆ ಶೇಕಡ 400ರಷ್ಟು ಏರಿಕೆ ಕಂಡು 600 ಪಾಕಿಸ್ತಾನಿ ರೂಪಾಯಿ (2.13 ಡಾಲರ್) ಗೆ ಏರಿದೆ. ಬಹುತೇಕ ಟೊಮ್ಯಾಟೊ ಪೂರೈಕೆ ಇಲ್ಲಿಗೆ ಅಫ್ಘಾನಿಸ್ತಾನದಿಂದ ಆಗುತ್ತಿದೆ. ಪ್ರತಿ ದಿನ 500 ಕಂಟೈನರ್ಗಳಷ್ಟು ತರಕಾರಿ ರಫ್ತಾಗುತ್ತಿತ್ತು. ಇದು ನಿಂತಿದೆ ಎಂದು ಅಲೋಕೊಝಿ ಹೇಳಿದ್ದಾರೆ. ಗಡಿಯ ಎರಡೂ ಕಡೆಗಳಲ್ಲಿ 500ಕ್ಕೂ ಹೆಚ್ಚು ಕಂಟೈನರ್ಗಳು ಸಾಲು ನಿಂತಿವೆ ಎಂದು ವಾಯುವ್ಯ ಪಾಕಿಸ್ತಾನದ ತೋರ್ಖಮ್ ಗಡಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೇಶದಲ್ಲಿ ಟೊಮ್ಯಾಟೊ, ಸೇಬು ಮತ್ತು ದ್ರಾಕ್ಷಿ ಅಭಾವ ವ್ಯಾಪಕವಾಗಿದೆ ಎಂದು ಅವರು ಹೇಳಿದ್ದಾರೆ.







