ಅಫ್ಘಾನಿಸ್ತಾನದಲ್ಲಿ ಪ್ರವಾಹಕ್ಕೆ ಕನಿಷ್ಠ 23 ಮಂದಿ ಮೃತ್ಯು

Photo Credit ; AP
ಕಾಬೂಲ್,ಜು.21: ಅಫ್ಘಾನಿಸ್ತಾನದ ಪೂರ್ವ ಭಾಗದ ನೂರಿಸ್ತಾನ್ ಪ್ರಾಂತದಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಆ ದೇಶದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೇಳಿಕೆ ತಿಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, 80 ಮಂದಿ ಗಾಯಗೊಂಡಿದ್ದಾರೆ. ಭಾರೀ ನೆರೆಯಿಂದಾಗಿ ನೂರಾರು ಮನೆಗಳು ಹಾಗೂ ಕಟ್ಟಡಗಳು ಕುಸಿದುಬಿದ್ದಿದ್ದು , ಅವಶೇಷಗಳ ನಡುವೆ ಸಿಲುಕಿಕೊಂಡಿರುವವರನ್ನು ಪಾರು ಮಾಡಲು ಪೊಲೀಸರು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.
ನೂರಿಸ್ತಾನ ಪ್ರಾಂತದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾದ ಬಳಿಕ ದಿಢೀರ್ ಪ್ರವಾಹವುಂಟಾಗಿತ್ತು. ವಸತಿ ಪ್ರದೇಶಗಳನ್ನು ಆವರಿಸಿದ ಪ್ರವಾಹವು ಹಲವಾರು ಮನೆಗಳು ಹಾಗೂ ಕಟ್ಟಡಗಳನ್ನು ನಾಶಪಡಿಸಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಹಲವಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅವರನ್ನು ಸಮೀಪದ ಪರಿಹಾರ ಶಿಬಿರಗಳಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.




