ಭಾರತದ ಪರೋಕ್ಷ ಯುದ್ಧದಲ್ಲಿ ಅಫ್ಘಾನ್ ಹೋರಾಡುತ್ತಿದೆ: ಪಾಕ್ ಆರೋಪ

ಕ್ವಾಜಾ ಆಸಿಫ್|Photo Credit:NDTV
ಇಸ್ಲಾಮಾಬಾದ್, ಅ.16: ಅಫ್ಘಾನಿಸ್ತಾನವು ಭಾರತದ `ಪ್ರಾಕ್ಸಿ ಯುದ್ಧ'(ಪರೋಕ್ಷ ಸಮರ)ದಲ್ಲಿ ಹೋರಾಡುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಕ್ವಾಜಾ ಆಸಿಫ್ ಪ್ರತಿಪಾದಿಸಿದ್ದು, ನಿರ್ಧಾರಗಳನ್ನು ಕಾಬೂಲ್ನಲ್ಲಿ ಅಲ್ಲ, ಹೊಸದಿಲ್ಲಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಭಾರತಕ್ಕೆ 6 ದಿನಗಳ ಭೇಟಿ ನೀಡಿದ ಸಂದರ್ಭ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ `ಯೋಜನೆ' ರೂಪಿಸಿದ್ದಾರೆ ಎಂದು ಆರೋಪಿಸಿರುವ ಕ್ವಾಜಾ, ಎರಡೂ ದೇಶಗಳ ನಡುವಿನ ಕದನ ವಿರಾಮದ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದ್ದಾರೆ.
ಗಡಿ ಭಾಗದಲ್ಲಿ ಕೆಲ ದಿನಗಳ ತೀವ್ರ ಘರ್ಷಣೆಯ ಬಳಿಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವೆ 48 ಗಂಟೆಗಳ ಕದನ ವಿರಾಮ ಬುಧವಾರ ಜಾರಿಗೆ ಬಂದಿದೆ. `ಕದನ ವಿರಾಮದ ಸಂದರ್ಭ ಎರಡೂ ಕಡೆಯವರು ಈ ಸಂಕೀರ್ಣ, ಆದರೆ ಪರಿಹರಿಸಬಹುದಾದ ಸಮಸ್ಯೆಗೆ ರಚನಾತ್ಮಕ ಮಾತುಕತೆಯ ಮೂಲಕ ಸಕಾರಾತ್ಮಕ ಪರಿಹಾರವನ್ನು ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದಾರೆ' ಎಂದು ಕ್ವಾಜಾ ಹೇಳಿದ್ದಾರೆ.
`ಪಾಕಿಸ್ತಾನವು ಉಲ್ಲಂಘಿಸದ ಹೊರತು' ಕದನ ವಿರಾಮವನ್ನು ಗೌರವಿಸುವಂತೆ ತನ್ನ ಪಡೆಗಳಿಗೆ ನಿರ್ದೇಶಿಸಿರುವುದಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ ಹೇಳಿದೆ.







