ಪಾಕ್, ಅಪ್ಘಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ: ಮಾಹಿತಿ ನೀಡಿದ ಖತರ್

Photo|indiatoday
ದೋಹಾ : ಖತರ್ನ ದೋಹಾದಲ್ಲಿ ನಡೆದ ಶಾಂತಿ ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಖತರ್ ವಿದೇಶಾಂಗ ಸಚಿವಾಲಯ ರವಿವಾರ ಮುಂಜಾನೆ ಪ್ರಕಟಿಸಿದೆ.
ತುರ್ಕಿಯೆ ರಾಷ್ಟ್ರದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಸಂಘರ್ಷದಲ್ಲಿ ತೊಡಗಿದ್ದ ಎರಡೂ ರಾಷ್ಟ್ರಗಳು ಶಾಶ್ವತ ಶಾಂತಿ ಪುನಃ ಸ್ಥಾಪನೆಗೆ ಒಪ್ಪಿಕೊಂಡಿದೆ ಎಂದು ಹೇಳಿದೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವ ಮುಲ್ಲಾ ಮುಹಮ್ಮದ್ ಯಾಕೂಬ್ ನೇತೃತ್ವದ ನಿಯೋಗವು ಮಾತುಕತೆಯಲ್ಲಿ ಭಾಗವಹಿಸಿದೆ ಎಂದು ಅಫ್ಘಾನ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ನೇತೃತ್ವದ ನಿಯೋಗವು ಸಭೆಯಲ್ಲಿ ಭಾಗವಹಿಸಿತ್ತು ಎಂದು ತಿಳಿದು ಬಂದಿದೆ.
“ಪಾಕಿಸ್ತಾನದ ವಿರುದ್ಧದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಲು ಮತ್ತು ಪಾಕ್-ಅಫ್ಘಾನ್ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ದೃಷ್ಟಿಯಿಂದ ಮಾತುಕತೆಗಳು ನಡೆದಿದೆ” ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.





