ಸೌದಿ, ತುರ್ಕಿಯೆ ಬಳಿಕ ಕುವೈತ್ ಜತೆಗೂ ರಕ್ಷಣಾ ಒಪ್ಪಂದ ಮಾಡಿಕೊಂಡ ಪಾಕಿಸ್ತಾನ
ತರಬೇತಿ, ಸಾಮರ್ಥ್ಯ ವೃದ್ಧಿ, ಗಡಿ ನಿರ್ವಹಣೆ ಸೇರಿ ಹಲವು ಕ್ಷೇತ್ರಗಳಿಗೆ ಅನ್ವಯ

Photo: x.com/DenizEmiraa
ಇಸ್ಲಾಮಾಬಾದ್, ಆ.27: ಪಾಕಿಸ್ತಾನ ಮತ್ತು ಕುವೈತ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಗುರುವಾರ ‘ಪ್ರೋಟೋಕಾಲ್ ಒಪ್ಪಂದ–2026’ಕ್ಕೆ ಸಹಿ ಹಾಕಿದವು.
ಸೌದಿ ಅರೇಬಿಯಾ ಮತ್ತು ತುರ್ಕಿಯೆಯೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಕಿಸ್ತಾನವು ಕುವೈತ್ ಜತೆಗೂ ರಕ್ಷಣಾ ಸಹಕಾರ ವಿಸ್ತರಣೆಗೆ ಒಪ್ಪಂದ ಮಾಡಿಕೊಂಡಿದೆ.
ರಾವಲ್ಪಿಂಡಿಯ ರಕ್ಷಣಾ ಸಚಿವಾಲಯದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹಾಗೂ ಕುವೈತ್ ನ ರಕ್ಷಣಾ ಸಚಿವ ಶೇಖ್ ಅಬ್ದುಲ್ಲಾ ಅಲಿ ಅಲ್–ಸಬಾಹ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ನಡುವೆ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕುವೈತ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಖಾಲಿದ್ ಅಲ್–ಶ್ರಿಯಾನ್ ಅವರು ನಿಯೋಗದಲ್ಲಿದ್ದರು.
ಅಧಿಕೃತ ಹೇಳಿಕೆಯ ಪ್ರಕಾರ, ಸಭೆಯಲ್ಲಿ ಪರಸ್ಪರ ಆಸಕ್ತಿಯ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ದ್ವಿಪಕ್ಷೀಯ ರಕ್ಷಣಾ ಸಂಬಂಧ, ಭದ್ರತಾ ಸಹಕಾರ ಮತ್ತು ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕುರಿತು ವಿಶೇಷ ಗಮನ ಹರಿಸಲಾಯಿತು.
‘ರಕ್ಷಣಾ ಸಹಕಾರ ಒಪ್ಪಂದ–2023’ರ ಅಡಿಯಲ್ಲಿ ಸ್ಥಾಪಿಸಲಾಗಿರುವ ಮಿಲಿಟರಿ ಸಹಕಾರದ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಹೊಸ ಒಪ್ಪಂದವು ಗಮನಾರ್ಹವಾಗಿ ವಿಸ್ತರಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ಹೊಸ ಒಪ್ಪಂದದ ಅನ್ವಯ ಪಾಕಿಸ್ತಾನದ ಸಶಸ್ತ್ರ ಪಡೆಗಳು ಕುವೈತ್ನ ಸಶಸ್ತ್ರ ಪಡೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ನೆರವು ನೀಡಲಿವೆ. ತರಬೇತಿ, ಸಾಮರ್ಥ್ಯ ವೃದ್ಧಿ, ಗಡಿ ನಿರ್ವಹಣೆ ಹಾಗೂ ಪರಸ್ಪರ ಒಪ್ಪಿಕೊಂಡಿರುವ ಇತರ ರಕ್ಷಣಾ ಸಹಕಾರದ ಕ್ಷೇತ್ರಗಳು ಇದರಲ್ಲಿ ಸೇರಿವೆ ಎಂದು ಹೇಳಿಕೆ ತಿಳಿಸಿದೆ.
ಎರಡು ‘ಸಹೋದರ ರಾಷ್ಟ್ರಗಳ’ ನಡುವಿನ ದೀರ್ಘಕಾಲದ ರಕ್ಷಣಾ ಸಂಬಂಧಕ್ಕೆ ಆಧಾರವಾಗಿರುವ ಆಳವಾದ ನಂಬಿಕೆ, ಪರಸ್ಪರ ಗೌರವ ಹಾಗೂ ಹಂಚಿಕೆಯ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಈ ಒಪ್ಪಂದ ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಸಿಮ್ ಮುನೀರ್ ಭೇಟಿ
ಕುವೈತ್ ನಿಯೋಗವು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಜನರಲ್ ಹೆಡ್ಕ್ವಾರ್ಟರ್ಸ್ (GHQ)ಗೆ ಭೇಟಿ ನೀಡಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಭೇಟಿಯಾಯಿತು ಎಂದು ಪಾಕಿಸ್ತಾನ ಸೇನೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಪರಸ್ಪರ ಹಿತಾಸಕ್ತಿಯ ವಿಷಯಗಳು, ಪ್ರಾದೇಶಿಕ ಭದ್ರತೆ ಮತ್ತು ದ್ವಿಪಕ್ಷೀಯ ರಕ್ಷಣಾ ಸಹಕಾರದ ಕುರಿತು ಚರ್ಚಿಸಲಾಯಿತು.






