ಬೈಕ್ ಕದ್ದ ಬಳಿಕ ಪೊಲೀಸರ ವಿರುದ್ಧವೇ ದೂರು ದಾಖಲಿಸಿದ ಕಳ್ಳ

ಸಾಂದರ್ಭಿಕ ಚಿತ್ರ | Photo: NDTV
ಲಂಡನ್: ಕದ್ದ ಬೈಕಿನಲ್ಲಿ ಪರಾರಿಯಾಗುತ್ತಿದ್ದಾಗ ಪೊಲೀಸ್ ನಾಯಿ ಕಚ್ಚಿದೆ ಎಂದು ಕಳ್ಳನೋರ್ವ ಪೊಲೀಸರ ವಿರುದ್ಧವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಪೂರ್ವ ಯಾರ್ಕ್ಶೈರ್ ನ ಹಲ್ ನಗರದಲ್ಲಿನ ದ್ವಿಚಕ್ರ ವಾಹನ ಪಾರ್ಕಿಂಗ್ ಪ್ರದೇಶದಿಂದ 125 ಸಿಸಿ ಮೋಟರ್ ಬೈಕನ್ನು ಕದ್ದು ಪರಾರಿಯಾಗುತ್ತಿದ್ದ 24 ವರ್ಷದ ಸೋನ್ನಿ ಸ್ಟೊವ್ ಎಂಬಾತನನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಈ ಹಂತದಲ್ಲಿ ವಿಪರೀತ ವಾಹನ ಸಂಚಾರವಿದ್ದ ರಸ್ತೆಯ ಪಕ್ಕ ಬೈಕನ್ನು ತ್ಯಜಿಸಿ ರಸ್ತೆಯ ಮತ್ತೊಂದು ಬದಿಗೆ ಓಡಲು ಯತ್ನಿಸಿದ ಸ್ಟೊವ್ಗೆ ವಾಹನವೊಂದು ಡಿಕ್ಕಿಯಾಗಿ ಎಡಗಾಲಿಗೆ ಏಟಾಗಿದೆ. ಆದರೂ ಓಡುವುದನ್ನು ಮುಂದುವರಿಸಿದ ಸ್ಟೊವ್ನನ್ನು ಬೆನ್ನಟ್ಟಿದ ಎರಡು ಪೊಲೀಸ್ ನಾಯಿಗಳು ಆತನನ್ನು ನೆಲಕ್ಕೆ ಕೆಡವಿ ಆತನ ಹೊಟ್ಟೆಯ ಭಾಗಕ್ಕೆ ಕಚ್ಚಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
ಬಳಿಕ ಸ್ಟೊವ್ನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ಆತ ಪೊಲೀಸರ ಮೇಲೆಯೇ ಕಾನೂನು ಕ್ರಮ ಕೈಗೊಳ್ಳುವಂತೆ ವಾದಿಸಿದ್ದಾನೆ. ನಾಯಿ ಕಚ್ಚಿದ್ದರಿಂದ ತನ್ನ ಹೊಟ್ಟೆಗೆ ಗಾಯವಾಗಿದ್ದು ಹಲವು ಹೊಲಿಗೆ ಹಾಕಲಾಗಿದೆ. ಅಲ್ಲದೆ ದಿನಾ ಬ್ಯಾಂಡೇಜ್ ಬದಲಾಯಿಸಬೇಕಿದ್ದು ತನಗೆ ಪರಿಹಾ ಒದಗಿಸಬೇಕು ಎಂದು ಸ್ಟೊವ್ ವಾದಿಸಿದ್ದಾನೆ. ಆದರೆ ಅದನ್ನು ತಳ್ಳಿಹಾಕಿದ ನ್ಯಾಯಾಲಯ ಆತನಿಗೆ ನಾಲ್ಕೂವರೆ ವರ್ಷ ಜೈಲುಶಿಕ್ಷೆಯ ಜತೆಗೆ ಮೂರು ವರ್ಷ ಮೂರು ತಿಂಗಳು ಡ್ರೈವಿಂಗ್ ಮಾಡುವುದರಿಂದ ನಿಷೇಧ ವಿಧಿಸಿ ತೀರ್ಪು ನೀಡಿದೆ.