ಅಮೆರಿಕದ ವಿವಿಧ ಸೇವೆಗಳಲ್ಲಿನ ತಾಂತ್ರಿಕ ವ್ಯತ್ಯಯಗಳಿಗೆ AI ಕಾರಣವಾಗಿರಬಹುದು: ಮಾರ್ಕ್ವೇನ್ ಮುಲ್ಲಿನ್
ಸೈಬರ್ ದಾಳಿಯ ಸಾಧ್ಯತೆ ತಳ್ಳಿಹಾಕಿದ ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ; AIನ ಸ್ವಯಂಚಾಲಿತ ಕಾರ್ಯನಿರ್ವಹಣೆಯಿಂದ ಸಮಸ್ಯೆ ಉಂಟಾಗಿರುವ ಶಂಕೆ

ಮಾರ್ಕ್ವೇನ್ ಮುಲ್ಲಿನ್ | Photo Credit : AP
ವಾಶಿಂಗ್ಟನ್: ಅಮೆರಿಕದಲ್ಲಿ ಇತ್ತೀಚೆಗೆ ವಿಮಾನಯಾನ, ಬ್ಯಾಂಕಿಂಗ್ ಸೇರಿದಂತೆ ಹಲವು ಪ್ರಮುಖ ಸೇವೆಗಳಲ್ಲಿ ಉಂಟಾದ ತಾಂತ್ರಿಕ ವ್ಯತ್ಯಯಗಳಿಗೆ ಕೃತಕ ಬುದ್ಧಿಮತ್ತೆ (AI) ಕಾರಣವಾಗಿರಬಹುದು ಎಂದು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್ವೇನ್ ಮುಲ್ಲಿನ್ ಹೇಳಿದ್ದಾರೆ. ಆದರೆ, ಈ ಘಟನೆಗಳ ಹಿಂದೆ ಸೈಬರ್ ದಾಳಿ ನಡೆದಿರುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.
ಸೋಮವಾರ ಫಾಕ್ಸ್ ನ್ಯೂಸ್ ನಿರೂಪಕ ಸೀನ್ ಹ್ಯಾನಿಟಿ ಅವರೊಂದಿಗೆ ಮಾತನಾಡಿದ ಮುಲ್ಲಿನ್, ಇತ್ತೀಚಿನ ಎಲ್ಲ ತಾಂತ್ರಿಕ ವ್ಯತ್ಯಯಗಳು ಪರಸ್ಪರ ಲಿಂಕ್ ಇಲ್ಲ ಎಂದು ತಿಳಿಸಿದ್ದಾರೆ. ವಿವಿಧ ಸೇವೆಗಳು ಸತತವಾಗಿ ಸ್ಥಗಿತಗೊಳ್ಳುತ್ತಿರುವುದು ಜನರಲ್ಲಿ ಅನುಮಾನ ಮೂಡಿಸಿದ್ದು, ಕೆಲವರಲ್ಲಿ ಆತಂಕಕ್ಕೂ ಕಾರಣವಾಗಿದೆ ಎಂದು ಹ್ಯಾನಿಟಿ ಸಂದರ್ಶನದ ವೇಳೆ ಪ್ರಸ್ತಾಪಿಸಿದ್ದರು.
ನ. 12ರಂದು ಮೈಕ್ರೋಸಾಫ್ಟ್ನ ಔಟ್ಲುಕ್ ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿದ್ದವು. ನ.13ರಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶಾದ್ಯಂತ ಅಪರೂಪದ 'ಗ್ರೌಂಡ್ ಸ್ಟಾಪ್' ಆದೇಶ ಹೊರಡಿಸಿತ್ತು. ಇದರಿಂದ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಇದೇ ದಿನ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ವೇತನ ಪಾವತಿ ಸೇವೆಗಳನ್ನು ಒದಗಿಸುವ ವರ್ಕ್ಡೇ ಸಾಫ್ಟ್ವೇರ್ ಕೂಡ ಸ್ಥಗಿತಗೊಂಡಿತ್ತು ಎಂದು ವರದಿಯಾಗಿತ್ತು.
ನ.16ರಂದು ಯುನೈಟೆಡ್ ಏರ್ಲೈನ್ಸ್ನ ಕಂಪ್ಯೂಟರ್ ವ್ಯವಸ್ಥೆ ಸ್ಥಗಿತಗೊಂಡು ವಿಮಾನ ಕಾರ್ಯಾಚರಣೆಗೆ ಅಡಚಣೆಯಾಗಿತ್ತು. ಅದೇ ದಿನ JPMorgan Chase & Co.ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ಆನ್ಲೈನ್ ಬ್ಯಾಂಕಿಂಗ್ ಸೇವೆಗಳ ಮೇಲೂ ಪರಿಣಾಮ ಉಂಟಾಗಿತ್ತು.
ಈ ಎಲ್ಲ ಘಟನೆಗಳು ಒಂದಕ್ಕೊಂದು ಲಿಂಕ್ ಹೊಂದಿಲ್ಲ. ಇವುಗಳಲ್ಲಿ ಯಾವುದೇ ಘಟನೆಯ ಹಿಂದೆ ಸೈಬರ್ ದಾಳಿ ನಡೆದಿರುವುದಕ್ಕೆ ಪುರಾವೆಗಳಿಲ್ಲ ಎಂದು ಮುಲ್ಲಿನ್ ಹೇಳಿದ್ದಾರೆ.
FAAಯ ಗ್ರೌಂಡ್ ಸ್ಟಾಪ್ ಗೆ ಹಳೆಯ ರೂಟರ್ ನಲ್ಲಿನ ಸಮಸ್ಯೆ ಕಾರಣವಾಗಿತ್ತು. JPMorgan Chase & Co.ನಲ್ಲಿನ ಸಮಸ್ಯೆಗೆ ಸಾಫ್ಟ್ವೇರ್ ದೋಷ ಕಾರಣವಾಗಿರಬಹುದು ಎಂದು ಕಂಡುಬಂದಿದೆ. ಸ್ಥಗಿತಗಳನ್ನು ಎದುರಿಸಿದ ಯಾವುದೇ ಕಂಪೆನಿಯೂ ಸೈಬರ್ ದಾಳಿಯ ಆರೋಪ ಮಾಡಿಲ್ಲ.
"ಇದು ಸೈಬರ್ ದಾಳಿ ಎಂದು ಭಾವಿಸುವಂತೆ ಮಾಡುವ ಯಾವುದೇ ನೆಟ್ವರ್ಕ್ ಚಟುವಟಿಕೆ ನಮಗೆ ಕಂಡುಬಂದಿಲ್ಲ. ವ್ಯವಸ್ಥೆಯೊಳಗೆ ಪ್ರವೇಶಿಸಿದ ಯಾವುದೇ ಕುರುಹುಗಳೂ ಪತ್ತೆಯಾಗಿಲ್ಲ" ಎಂದು ಮುಲ್ಲಿನ್ ತಿಳಿಸಿದ್ದಾರೆ.
ಅಮೆರಿಕದ ಮೇಲೆ ಸೈಬರ್ ದಾಳಿ ನಡೆದಿಲ್ಲ ಎಂಬ ಬಗ್ಗೆ ಶೇ. 98ರಷ್ಟು ಖಚಿತತೆ ಇದೆ ಎಂದಿರುವ ಅವರು, ಯಾವುದೇ ವ್ಯಕ್ತಿ ಅಥವಾ ಸಂಘಟನೆ ಈ ಘಟನೆಗಳ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಹೇಳಿದ್ದಾರೆ.
ಸೈಬರ್ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕಿದ ಮುಲ್ಲಿನ್, ತಂತ್ರಜ್ಞಾನ ಉದ್ಯಮದಲ್ಲಿರುವ ವ್ಯಕ್ತಿಯೊಬ್ಬರು ಈ ವ್ಯತ್ಯಯಗಳ ಹಿಂದೆ AI ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದಿದ್ದಾರೆ. ಈ ಅಭಿಪ್ರಾಯ ವ್ಯಕ್ತಪಡಿಸಿದವರು ಉದ್ಯಮಿ ಎಲಾನ್ ಮಸ್ಕ್ ಅಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಕೃತಕ ಬುದ್ಧಿಮತ್ತೆಯನ್ನು 'ಸೂಪರ್ ಇಂಟೆಲಿಜೆನ್ಸ್' (SI) ಎಂದು ಉಲ್ಲೇಖಿಸಿದ ಮುಲ್ಲಿನ್, AI ಪ್ರೋಗ್ರಾಮ್ ಗಳು ಈಗಿನ ಕಂಪ್ಯೂಟರ್ ವ್ಯವಸ್ಥೆಗಳು ನಿಭಾಯಿಸಲಾಗದಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
AIಗಳು ಸ್ವತಃ ಕೋಡ್ ಬರೆಯುವ ಮತ್ತು ಅದರಲ್ಲಿನ ದೋಷಗಳನ್ನು ತಾವೇ ಸರಿಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ, ಈ ಪ್ರಕ್ರಿಯೆಯಲ್ಲಿ ಅವು ಮಾಡುವ ಬದಲಾವಣೆಗಳು ಒಂದರ ಹಿಂದೆ ಒಂದರಂತೆ ಮುಂದುವರಿದರೆ, ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ಅತಿಯಾದ ಒತ್ತಡ ಉಂಟಾಗಬಹುದು. ಇದರಿಂದ ಇಡೀ ವ್ಯವಸ್ಥೆಯ ಕಾರ್ಯನಿರ್ವಹಣೆಯೇ ಸ್ಥಗಿತಗೊಳ್ಳಬಹುದು ಎಂಬುದು ತಜ್ಞರ ವಿವರಣೆಯಾಗಿದೆ.
"ಇದನ್ನು ಮನೆಯೊಂದರಲ್ಲಿನ ಬದಲಾವಣೆಗೆ ಹೋಲಿಸಿದ ಮುಲ್ಲಿನ್, "ಕೋಡ್ ಬರೆಯಬಲ್ಲ ಪ್ರೋಗ್ರಾಮ್ ಅಳವಡಿಸಿದಾಗ, ಅದು ವ್ಯವಸ್ಥೆಯೊಳಗೆ ಪ್ರವೇಶಿಸಿ ತನ್ನಲ್ಲಿನ ದೋಷಗಳನ್ನು ತಾನೇ ಸರಿಪಡಿಸಿಕೊಳ್ಳಲು ಆರಂಭಿಸುತ್ತದೆ. ಮನೆಯೊಂದರಲ್ಲಿ ಒಂದು ಬದಲಾವಣೆಗೆ ಆದೇಶ ನೀಡಿದಾಗ, ಅದರಿಂದ ಮತ್ತಷ್ಟು ಬದಲಾವಣೆಗಳು ಉಂಟಾಗುವಂತೆಯೇ ಇಲ್ಲಿಯೂ ಆಗಬಹುದು" ಎಂದು ಹೇಳಿದ್ದಾರೆ.
ಇಂತಹ ಸ್ವಯಂ ತಿದ್ದುಪಡಿಗಳಿಂದ ಸರಣಿ ಪರಿಣಾಮ ಉಂಟಾಗಿ, ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಬಹುದು. ಇಂದಿನ ಸೂಪರ್ ಇಂಟೆಲಿಜೆನ್ಸ್ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಕಂಪ್ಯೂಟರ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿಲ್ಲ ಎಂದು ತಂತ್ರಜ್ಞಾನ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಮುಲ್ಲಿನ್ ತಿಳಿಸಿದ್ದಾರೆ.
"ಇದು ಸರಣಿ ಪರಿಣಾಮವನ್ನು ಉಂಟುಮಾಡಿ ವ್ಯವಸ್ಥೆಯನ್ನು ಅತಿಕ್ರಮಿಸಬಹುದು. ಇಂದಿನ ಸೂಪರ್ ಇಂಟೆಲಿಜೆನ್ಸ್ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಈ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿಲ್ಲ" ಎಂದು ಅವರು ರಾಷ್ಟ್ರೀಯ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.






