AI ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ; ವ್ಯಾಟಿಕನ್ನಲ್ಲಿ ವೇದಿಕೆ ಹಂಚಿಕೊಂಡ ಪೋಪ್ ಮತ್ತು ಕ್ರಿಸ್ಟೋಫ್ ಅಭಿಮತ

Photo| CNS/Lola Gomez
AI ಅಪಾಯವನ್ನು ಅಲಕ್ಷಿಸಲಾಗದಷ್ಟು ಬೃಹತ್ ಆಗಿ ಬೆಳೆಯುತ್ತಿದೆ ಎಂದು ಪೋಪ್ ಮತ್ತು ಓಲಾಹ್ ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕ ಕ್ಷಣದಲ್ಲಿ ಮೇ 25ರಂದು ಪೋಪ್ ಲಿಯೋ XIV ‘ಮ್ಯಾಗ್ನಿಫಿಕಾ ಹ್ಯುಮಾನಿಟಾಸ್’ ಪ್ರಸ್ತುತಪಡಿಸಿದಾಗ ಒಟ್ಟು ಗಮನವು ನೈತಿಕತೆ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI)ಯ ಭವಿಷ್ಯದ ಬಗ್ಗೆ ಕೇಂದ್ರೀಕರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬದಲಾಗಿ, AI ಮಾನವ ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಕಸಿದುಕೊಳ್ಳಲಿದೆ ಎನ್ನುವ ಎಚ್ಚರಿಕೆ ಉಳಿದೆಲ್ಲವನ್ನೂ ಬದಿಗಿಟ್ಟು ಸುದ್ದಿಯಾಗಿದೆ.
ಪೋಪ್ ಲಿಯೋ XIV ಅವರು ಅನಿಯಂತ್ರಿತ ತಾಂತ್ರಿಕ ಶಕ್ತಿಯ ಬಗ್ಗೆ ಎಚ್ಚರಿಸಿದರೆ, ಅಂಥ್ರೋಪಿಕ್ ಸಹ-ಸಂಸ್ಥಾಪಕ ಕ್ರಿಸ್ಟೋಫ್ ಓಲಾಹ್ ವಿಶ್ವಾದ್ಯಂತ ಕಾರ್ಮಿಕರ ಮಟ್ಟಿಗೆ AI ಏನು ಬದಲಾವಣೆ ತರಲಿದೆ ಎಂಬುದರ ಸ್ಪಷ್ಟ ಸಂದೇಶ ನೀಡಿದ್ದಾರೆ.
ಚರ್ಚ್ AI ಕುರಿತ ವಿಶ್ವಕೋಶವನ್ನು (ಎನ್ಸೈಕ್ಲಿಕಲ್) ಬಿಡುಗಡೆ ಮಾಡಿದಾಗ ವ್ಯಾಟಿಕನ್ ಅಡಿಟೋರಿಯಂನಲ್ಲಿ ಕಾರ್ಡಿನಲ್ಗಳು ಮತ್ತು ಧರ್ಮಗುರುಗಳ ನಡುವೆ ಕ್ರಿಸ್ಟೋಫ್ ಓಲಾಹ್ ಅವರೂ ಕುಳಿತಿದ್ದರು.
ವ್ಯಾಪಕ ಉದ್ಯೋಗ ಕಡಿತ
ರೋಮನ್ ಕ್ಯೂರಿಯ ಸದಸ್ಯರಿಗಿಂತ ಮೊದಲು ಮಾತನಾಡಿದ ಕ್ರಿಸ್ಟೋಫ್ ಓಲಾಹ್, AI ಮಾನವ ಶ್ರಮವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸುವ ನಿಜವಾದ ಸಾಧ್ಯತೆ ಇದೆ ಎಂದು ಹೇಳಿದರು. ಹಾಗಾದಲ್ಲಿ ಸ್ಥಳಾಂತರಗೊಂಡ ಕಾರ್ಮಿಕರನ್ನು ಬೆಂಬಲಿಸುವುದು ನೈತಿಕ ಕಡ್ಡಾಯವಾಗುತ್ತದೆ ಎಂದೂ ಹೇಳಿದ್ದಾರೆ.
ಕಂಪನಿಗಳು ವೇಗವಾಗಿ ಕೋಡಿಂಗ್ ಮಾಡುವ, ಡೇಟಾ ವಿಶ್ಲೇಷಿಸುವ ಮತ್ತು ಕೆಲಸದ ಸ್ಥಳದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಸಾಮರ್ಥ್ಯವಿರುವ AI ಸಾಧನಗಳನ್ನು ಹೊರತರುತ್ತಿರುವ ಸಂದರ್ಭದಲ್ಲಿ ಓಲಾಹ್ ಅವರ ಹೇಳಿಕೆಗಳು ಕಳವಳಕಾರಿ ಎನ್ನಲಾಗಿದೆ. ತಂತ್ರಜ್ಞಾನವು ಸಮಾಜಗಳು ಸಿದ್ಧವಾಗುವುದಕ್ಕಿಂತ ವೇಗವಾಗಿ ಉದ್ಯೋಗಗಳನ್ನು ಮರುರೂಪಿಸಬಹುದು ಎಂಬ ಆತಂಕವನ್ನೂ ಇದು ಪ್ರತಿಬಿಂಬಿಸುತ್ತದೆ.
ಕೇಂದ್ರೀಕೃತ ಶಕ್ತಿಯ ಬಗ್ಗೆ ಎಚ್ಚರಿಸಿದ ಪೋಪ್
‘ಮ್ಯಾಗ್ನಿಫಿಕಾ ಹ್ಯುಮಾನಿಟಾಸ್’ ಎಂಬ ಶೀರ್ಷಿಕೆಯಡಿ ಬಿಡುಗಡೆಯಾದ ವಿಶ್ವಕೋಶವು AI ಉದಯದ ಸಮಯದಲ್ಲಿ ಮಾನವೀಯತೆಯನ್ನು ರಕ್ಷಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ತ್ವರಿತ ಮತ್ತು ಅನಿಯಂತ್ರಿತ ತಾಂತ್ರಿಕ ಅಭಿವೃದ್ಧಿಯಿಂದ ಸಮಕಾಲೀನ ಬಿಕ್ಕಟ್ಟುಗಳು ತೀವ್ರಗೊಳ್ಳಲಿವೆ ಎಂದು ದಾಖಲೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪೋಪ್ ಲಿಯೋ XIV ಅವರು AI ಕಂಪನಿಗಳ ಮೇಲೆ ಪ್ರಬಲ ಸರ್ಕಾರಿ ನಿಯಂತ್ರಣಕ್ಕೆ ಒತ್ತಾಯಿಸಿದ್ದಾರೆ.
“ಡಿಜಿಟಲ್ ಜಗತ್ತಿನಲ್ಲಿ ಅಧಿಕಾರದ ಕೇಂದ್ರೀಕರಣ” ಎಂದು ಅವರು ಕಂಪನಿಗಳ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಟೀಕಿಸಿದ್ದಾರೆ. ವ್ಯಾಟಿಕನ್ ಸ್ಪಷ್ಟ ಸಂದೇಶ ನೀಡಿದ್ದು, “AI ಕೇವಲ ತಾಂತ್ರಿಕ ಸಮಸ್ಯೆಯಲ್ಲ; ಅದು ಮಾನವೀಯ ಸಮಸ್ಯೆಯೂ ಹೌದು” ಎಂದು ಪೋಪ್ ಹೇಳಿದ್ದಾರೆ.
AI ಕಂಪನಿಗಳ ಮೇಲೆ ಅಗಾಧ ಒತ್ತಡ
ಓಲಾಹ್ ಅವರ ಪ್ರಕಾರ, AI ಕಂಪನಿಗಳು ಸ್ವತಃ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿವೆ. “ಮುಂಚೂಣಿಯಲ್ಲಿರುವ AI ಪ್ರಯೋಗಾಲಯಗಳು ವಾಣಿಜ್ಯ ಸ್ಪರ್ಧೆ, ಭೌಗೋಳಿಕ-ರಾಜಕೀಯ ಒತ್ತಡಗಳು ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಎದುರಿಸುತ್ತಿವೆ. ಹೀಗಾಗಿ ಕೆಲವೊಮ್ಮೆ ಸಮಾಜದ ವಿಶಾಲ ಹಿತಾಸಕ್ತಿಯೊಂದಿಗೆ ಸಂಘರ್ಷ ಉಂಟಾಗಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಪ್ರತಿ ಮುಂಚೂಣಿಯ AI ಪ್ರಯೋಗಾಲಯವೂ ಸೂಕ್ತ ಕೆಲಸ ಮಾಡುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಎದುರಿಸುತ್ತಿದೆ. ಉತ್ತೇಜಕಗಳು ಮತ್ತು ನಿರ್ಬಂಧಗಳ ನಡುವಿನ ಈ ಪರಿಸ್ಥಿತಿ ಹಿತಾಸಕ್ತಿ ಸಂಘರ್ಷಕ್ಕೂ ಕಾರಣವಾಗಬಹುದು. ಸದುದ್ದೇಶದ ಸಂಶೋಧಕರೂ ಇಂತಹ ಶಕ್ತಿಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಅದಕ್ಕಾಗಿಯೇ ಹೊರಗಿನ ಟೀಕೆ ಮತ್ತು ಸಾರ್ವಜನಿಕ ಪರಿಶೀಲನೆ ಅಗತ್ಯ” ಎಂದು ಅವರು ಹೇಳಿದ್ದಾರೆ.
ವ್ಯಾಟಿಕನ್ ಮತ್ತು ಅಂಥ್ರೋಪಿಕ್ ವೇದಿಕೆ ಹಂಚಿಕೊಂಡಿರುವುದೇಕೆ?
ವಿಶೇಷವಾಗಿ AI ಕುರಿತು ವ್ಯಾಟಿಕನ್ ಪದೇಪದೆ ಎಚ್ಚರಿಕೆ ನೀಡುತ್ತಿರುವುದನ್ನು ಗಮನಿಸಿದರೆ, ಪೋಪ್ ಮತ್ತು AI ಸಹ-ಸಂಸ್ಥಾಪಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ಆದರೆ AI ಅಪಾಯವನ್ನು ಅಲಕ್ಷಿಸಲಾಗದಷ್ಟು ಬೃಹತ್ ಆಗಿ ಬೆಳೆಯುತ್ತಿದೆ ಎಂದು ಪೋಪ್ ಮತ್ತು ಓಲಾಹ್ ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.
“ತಂತ್ರಜ್ಞಾನ ಕಂಪನಿಗಳು ಮತ್ತು ಚರ್ಚ್ ಸೇರಿದಂತೆ ಬಾಹ್ಯ ಸಂಸ್ಥೆಗಳ ನಡುವೆ ಸಂವಾದ ಮತ್ತು ಪರಸ್ಪರ ಸಹಕಾರ ಅಗತ್ಯವಿದೆ. ಸಂವಾದ ಮತ್ತು ಸಹಕಾರದ ಮೂಲಕ ಎಳೆದಾಟ ಮತ್ತು ಓಲೈಕೆಯ ನಡುವೆಯೂ ಮಾನವೀಯವಾಗಿ ದೊಡ್ಡ ಸಾಧನೆ ಸಾಧ್ಯ” ಎಂದು ಓಲಾಹ್ ಹೇಳಿದ್ದಾರೆ.






