ಸೌದಿ ಅರೇಬಿಯಾಕ್ಕೆ ವಿಮಾನಗಳ ಸಂಚಾರ ಅ.24ರವರೆಗೆ ರದ್ದುಗೊಳಿಸಿದ ಏರ್ ಇಂಡಿಯಾ

ಏರ್ ಇಂಡಿಯಾ | Photo Credit : PTI
ಹೊಸದಿಲ್ಲಿ: ಹೆಚ್ಚುತ್ತಿರುವ ಜಾಗತಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾಕ್ಕೆ ವಿಮಾನ ಸಂಚಾರ ರದ್ದುಗೊಳಿಸಿರುವುದನ್ನು ಅಕ್ಟೋಬರ್ 24ರವರೆಗೆ ವಿಸ್ತರಿಸಿರುವುದಾಗಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಶನಿವಾರ ಪ್ರಕಟಿಸಿವೆ.
ಈ ವಾರದ ಆರಂಭದಲ್ಲಿ ಇಂಡಿಗೊ ಮತ್ತು ಅಕಾಸ ಏರ್ ಸೌದಿ ಅರೇಬಿಯಾದ ನಗರಗಳಿಗೆ ತಮ್ಮ ವಿಮಾನ ಸೇವೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದವು.
‘‘ಪ್ರಸಕ್ತ ಪರಿಸ್ಥಿತಿ ಗಮನದಲ್ಲಿರಿಸಿಕೊಂಡು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಜಿದ್ದಾ, ರಿಯಾದ್ ಮತ್ತು ದಮ್ಮಾಮ್ಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಅಕ್ಟೋಬರ್ 24ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಿವೆೆ’’ ಎಂದು ಏರ್ ಇಂಡಿಯಾ ‘ಎಕ್ಸ್’ನ ಪೋಸ್ಟ್ನಲ್ಲಿ ತಿಳಿಸಿದೆ.
ಈ ಅವಧಿಯಲ್ಲಿ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಬದ್ಧವಾಗಿರುವುದಾಗಿ ಅದು ಹೇಳಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಏರ್ಲೈನ್ ಹೇಳಿದೆ. ಏರ್ ಇಂಡಿಯಾ ಶುಕ್ರವಾರ ಅಕ್ಟೋಬರ್ 20ರವರೆಗೆ ಸೌದಿ ಅರೇಬಿಯಾಕ್ಕೆ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿತ್ತು. ಏರ್ ಇಂಡಿಯಾ ಎಕ್ಸ್ಪ್ರೆಸ್ ಈ ಹಿಂದೆ ಅಕ್ಟೋಬರ್ 17ರವರೆಗೆ ಗಲ್ಫ್ ದೇಶಕ್ಕೆ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇಂಡಿಗೊ ಗುರುವಾರ ಸೌದಿ ಅರೇಬಿಯಾದ ನಗರಗಳಿಗೆ ವಿಮಾನಗಳ ಸಂಚಾರ ರದ್ದುಗೊಳಿಸಿರುವುದನ್ನು ಅಕ್ಟೋಬರ್ 24ರವರಗೆ ವಿಸ್ತರಿಸಿರುವುದಾಗಿ ಘೋಷಿಸಿತ್ತು.
ಮಧ್ಯಪ್ರಾಚ್ಯದಲ್ಲಿ ಪ್ರಸಕ್ತ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಗುರುವಾರ ರಿಯಾದ್ಗೆ ಹೋಗುವ ಮತ್ತು ಅಲ್ಲಿಂದ ಬರುವ ಎಲ್ಲಾ ವಿಮಾನಗಳನ್ನು ಅಕ್ಟೋಬರ್ 24ರವರೆಗೆ ಹಾಗೂ ಜಿದ್ದಾಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ಅಕ್ಟೋಬರ್ 21ರವರೆಗೆ ರದ್ದುಗೊಳಿಸಿರುವುದಾಗಿ ಅಕಾಸ ಏರ್ ತಿಳಿಸಿದೆ.
ರಿಯಾದ್ ವಿಮಾನ ನಿಲ್ದಾಣ ಸೇರಿದಂತೆ ಸೌದಿ ಅರೇಬಿಯಾದ ನಾಗರಿಕ ಮೂಲ ಸೌಕರ್ಯಗಳನ್ನು ಗುರಿಯಾಗಿರಿಸಿಕೊಂಡು ಯೆಮನ್ನ ಹೌತಿಗಳು ನಡೆಸುತ್ತಿರುವ ದಾಳಿಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.






