ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ಥೈಲ್ಯಾಂಡ್ ನಲ್ಲಿ ತುರ್ತು ಭೂ ಸ್ಪರ್ಶ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಥೈಲ್ಯಾಂಡ್ ನ ಫುಕೆಟ್ನಿಂದ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನಕ್ಕೆ ಶುಕ್ರವಾರ ಬಾಂಬ್ ಬೆದರಿಕೆ ಬಂದ ನಂತರ ಥೈಲ್ಯಾಂಡ್ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
AI 379 ವಿಮಾನದಲ್ಲಿ ಒಟ್ಟು 156 ಪ್ರಯಾಣಿಕರಿದ್ದರು. ಬಾಂಬ್ ಬೆದರಿಕೆ ಬರುತ್ತಿದ್ದಂತೆ ವಿಮಾನವನ್ನು ಫುಕೆಟ್ಗೆ ಹಿಂದುರಗಿಸಲಾಯಿತು. ನಂತರ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಥೈಲ್ಯಾಂಡ್ ವಿಮಾನ ನಿಲ್ದಾಣ (AOT) ತಿಳಿಸಿವೆ.
ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ 9:30 ಕ್ಕೆ ಫುಕೆಟ್ ವಿಮಾನ ನಿಲ್ದಾಣದಿಂದ ಟೈಪ್ ಆಫ್ ಆಗಿತ್ತು. ಬೆದರಿಕೆ ಬರುತ್ತಿದ್ದಂತೆ ವಿಮಾನವನ್ನು ಭಾರತದ ಕಡೆಗೆ ಹೋಗುವ ಬದಲು, ಅಂಡಮಾನ್ ಸಮುದ್ರದ ಮೇಲೆ ತಿರುಗಿಸಿ ಥಾಯ್ ದ್ವೀಪಕ್ಕೆ ಹಿಂದಿರುಗಿಸಲಾಯಿತು ಎಂದು ಫ್ಲೈಟ್ರಾಡಾರ್ 24 ದೃಢಪಡಿಸಿತು.
ಪ್ರಯಾಣಿಕರನ್ನು ಯಾವುದೇ ಘಟನೆಯಿಲ್ಲದೆ ವಿಮಾನದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು AOT ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಬಾಂಬ್ ಬೆದರಿಕೆಯ ಸ್ವರೂಪ ಅಥವಾ ಮೂಲದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಈ ಘಟನೆಯ ಬಗ್ಗೆ ಏರ್ ಇಂಡಿಯಾ ಯಾವುದೇ ಔಪಚಾರಿಕ ಹೇಳಿಕೆ ನೀಡಿಲ್ಲ. ಥಾಯ್ಲಂಡ್ ಅಧಿಕಾರಿಗಳು ಬಾಂಬ್ ಬೆದರಿಕೆಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ಇಂತಹ ಬೆದರಿಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಸುಮಾರು 1,000 ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ್ದವು.







