ತೀವ್ರಗೊಂಡ ಇರಾನ್ ನೊಂದಿಗಿನ ಸಂಘರ್ಷ | ಇಸ್ರೇಲ್ ನಲ್ಲಿರುವ ಅಮೆರಿಕದ ಪ್ರಜೆಗಳ ʼಏರ್ ಲಿಫ್ಟ್ʼ ಪ್ರಾರಂಭ

ಸಾಂಧರ್ಭಿಕ ಚಿತ್ರ | Photo: x/@IranNewsX
ಟೆಲ್ ಅವೀವ್ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ತೊರೆದು ಅಮೆರಿಕಕ್ಕೆ ವಾಪಾಸ್ಸಾಗಲು ಬಯಸುವ, ಅಮೆರಿಕ ಪ್ರಜೆಗಳನ್ನು ಕರೆತರಲು ವಿಮಾನಗಳನ್ನು ಪ್ರಾರಂಭಿಸಲಾಗಿದೆ ಎಂದು ಇಸ್ರೇಲ್ ನಲ್ಲಿರುವ ಅಮೆರಿಕದ ರಾಯಭಾರಿ ಮೈಕ್ ಹಕಬೀ ಹೇಳಿದ್ದಾರೆ.
ಸ್ವದೇಶಕ್ಕೆ ಮರಳಲು ಸರ್ಕಾರದಿಂದ ಸಹಾಯ ಬಯಸುವ ಅಮೆರಿಕದ ನಾಗರಿಕರು ಮತ್ತು ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ನಲ್ಲಿರುವ ಸರ್ಕಾರಿ ವೆಬ್ಸೈಟ್ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡುವಂತೆ ಅವರು ಸೂಚಿಸಿದ್ದಾರೆ. ಪ್ರಜೆಗಳನ್ನು ವಿಮಾನ ಬಳಸಿ ಏರ್ ಲಿಫ್ಟ್ ಮಾಡಲಾಗುವುದು. ಅದರೊಂದಿಗೆ ಕ್ರೂಸ್ ಹಡಗುಗಳನ್ನೂ ಅಮೆರಿಕವು ಬಳಸಲಿದೆ ಎಂದು ತಿಳಿದು ಬಂದಿದೆ.
ಇರಾನ್ – ಇಸ್ರೇಲ್ ನಡುವಿನ ಸಂಘರ್ಷವು 9 ನೇ ದಿನಕ್ಕೆ ಕಾಲಿಟ್ಟಿದ್ದು. ಎರಡೂ ದೇಶಗಳು ಯುದ್ಧದಿಂದ ನಲುಗಿವೆ. ಇಸ್ರೇಲ್ ನ ಟೆಲ್ ಅವೀವ್, ಹೈಫಾ ಪ್ರದೇಶದ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಅಲ್ಲದೇ ಟೆಲ್ ಅವೀವ್ ತೊರೆದು ಹೋಗುವಂತೆ ಇರಾನ್ ಮಿಲಿಟರಿಯು ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡುತ್ತಲೇ ಇದೆ.





