ಫೆಲೆಸ್ತೀನಿನ ಕೈದಿಗಳ ಮೇಲೆ ಅತ್ಯಾಚಾರಕ್ಕೆ ಯುರೋಪಿನ ತರಬೇತಿ ಪಡೆದ ನಾಯಿಗಳ ಬಳಕೆ: ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬನೀಸ್ ಗಂಭೀರ ಆರೋಪ
ʼಅತ್ಯಾಚಾರಕ್ಕೆ ಬಳಸುವ ನಾಯಿಗಳ ಮಾರಾಟದಿಂದ ಯುರೋಪ್ ಗೆ ಲಾಭ’

Photo Credit : AP
ಡಬ್ಲಿನ್: ಇಸ್ರೇಲಿ ಜೈಲುಗಳಲ್ಲಿ ಬಂಧನದಲ್ಲಿರುವ ಫೆಲೆಸ್ತೀನಿನ ಕೈದಿಗಳ ಮೇಲೆ ಅತ್ಯಾಚಾರ ಸೇರಿದಂತೆ ಲೈಂಗಿಕ ದೌರ್ಜನ್ಯ ಎಸಗಲು ವಿಶೇಷ ತರಬೇತಿ ಪಡೆದ ನಾಯಿಗಳನ್ನು ಬಳಸಲಾಗುತ್ತಿದೆ. ಇಂತಹ ನಾಯಿಗಳನ್ನು ಯುರೋಪಿನ ರಾಷ್ಟ್ರಗಳೇ ಪೂರೈಸುತ್ತಿದ್ದು, ಈ ಮೂಲಕ ಅವು ಲಾಭ ಗಳಿಸುತ್ತಿವೆ ಎಂದು ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬನೀಸ್ ಗಂಭೀರ ಆರೋಪ ಮಾಡಿದ್ದಾರೆ.
ಐರ್ಲೆಂಡ್ ನ ಯುರೋಪಿಯನ್ ವ್ಯವಹಾರಗಳ ಕುರಿತ ಒಯಿರೀಚ್ಟಾಸ್ ಸಮಿತಿಯ ಮುಂದೆ ಮಂಗಳವಾರ ಮಾತನಾಡಿದ ಅವರು, ಇಸ್ರೇಲಿ ಜೈಲುಗಳಲ್ಲಿ ಬಂಧನದಲ್ಲಿದ್ದಾಗ ನಾಯಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದೇವೆ ಎಂದು ಫೆಲೆಸ್ತೀನಿನ ಕೈದಿಗಳು ನೀಡಿರುವ ಸಾಕ್ಷ್ಯಗಳನ್ನು ಉಲ್ಲೇಖಿಸಿದರು.
‘ಜನರ ಮೇಲೆ ಅತ್ಯಾಚಾರ ಎಸಗಲು ತರಬೇತಿ ಪಡೆದ ನಾಯಿಗಳನ್ನು ಯುರೋಪಿನ ರಾಷ್ಟ್ರಗಳು ಮಾರಾಟ ಮಾಡುತ್ತಿವೆ. ಇದರಿಂದ ಅವು ಲಾಭ ಗಳಿಸುತ್ತಿವೆ. ಇದು ಅತ್ಯಂತ ಹೀನಾಯ ಸಂಗತಿ. ಇಂತಹ ಕೃತ್ಯಗಳನ್ನು ತಡೆಯಲು ಕಾನೂನು ವ್ಯವಸ್ಥೆಯನ್ನು ಬಳಸಬೇಕಾದವರು, ಬದಲಿಗೆ ಈ ಉಲ್ಲಂಘನೆಗಳನ್ನು ಪ್ರಶ್ನಿಸುವವರನ್ನೇ ಜೈಲಿಗೆ ಹಾಕುತ್ತಿದ್ದಾರೆ’ ಎಂದು ಅವರು ಟೀಕಿಸಿದರು.
ಫೆಲೆಸ್ತೀನಿಯರ ವಿರುದ್ಧ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಇಸ್ರೇಲ್ ಅನ್ನು ಹೊಣೆಗಾರನನ್ನಾಗಿ ಮಾಡುವಲ್ಲಿ ಯುರೋಪಿಯನ್ ಒಕ್ಕೂಟ ವಿಫಲವಾಗಿದೆ. ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸುತ್ತಿರುವ ವಸಾಹತುಶಾಹಿ ಪ್ರಕ್ರಿಯೆಯಲ್ಲಿ ಯುರೋಪಿನ ಒಕ್ಕೂಟವೂ ಭಾಗಿಯಾಗಿದೆ ಎಂದು ಆರೋಪಿಸಿದರು.
2023ರ ಅಕ್ಟೋಬರ್ ನಿಂದ ಫೆಲೆಸ್ತೀನಿನ ಬಂಧಿತರ ಮೇಲೆ ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. 2026ರ ಮೇನಲ್ಲಿ ವಿಶ್ವಸಂಸ್ಥೆಯ ಚಿತ್ರಹಿಂಸೆ ಕುರಿತ ವಿಶೇಷ ವರದಿಗಾರರು ನೀಡಿದ ಸಂವಹನ ವರದಿಯಲ್ಲಿ ಲೈಂಗಿಕ ಹಿಂಸೆ ಮತ್ತು ದೌರ್ಜನ್ಯದ 33 ಘಟನೆಗಳನ್ನು ದಾಖಲಿಸಲಾಗಿದೆ.
ಇಸ್ರೇಲ್ ದಶಕಗಳಿಂದ ಫೆಲೆಸ್ತೀನಿಯರ ವಿರುದ್ಧ ಮಕ್ಕಳ ಹತ್ಯೆ, ಕಾನೂನುಬಾಹಿರ ಹತ್ಯೆ, ಮನಸೋ ಇಚ್ಛೆ ಬಂಧನ, ಚಿತ್ರಹಿಂಸೆ ಮತ್ತು ಅತ್ಯಾಚಾರದಂತಹ ಕೃತ್ಯಗಳನ್ನು ನಡೆಸುತ್ತಿದೆ ಎಂದು ಅಲ್ಬನೀಸ್ ಆರೋಪಿಸಿದರು. ಫೆಲೆಸ್ತೀನಿಯರ ಮೇಲಿನ ಅತ್ಯಾಚಾರದ ಘಟನೆಗಳು 1948ರಲ್ಲೇ ವರದಿಯಾಗಿದ್ದವು. 1967ರಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು.
‘ಆದರೆ, ಈಗ ನಡೆಯುತ್ತಿರುವ ದೌರ್ಜನ್ಯಗಳು ಹಿಂದೆಂದಿಗಿಂತಲೂ ತೀವ್ರವಾಗಿವೆ. ಇದರ ಉದ್ದೇಶ ಕೇವಲ ಜನರನ್ನು ಕೊಲ್ಲುವುದಲ್ಲ. ಜೀವಂತವಾಗಿರುವವರನ್ನೂ ದೈಹಿಕವಾಗಿ ಮತ್ತು ಮಾನಸಿಕವಾಗಿ ನಾಶಪಡಿಸಲಾಗುತ್ತಿದೆ. ಚಿತ್ರಹಿಂಸೆಗೊಳಗಾದವರು ಮತ್ತು ಅತ್ಯಾಚಾರಕ್ಕೊಳಗಾದವರ ಸಾಕ್ಷ್ಯಗಳನ್ನು ಓದಿದಾಗ ಪರಿಸ್ಥಿತಿಯ ಭೀಕರತೆ ಅರ್ಥವಾಗುತ್ತದೆ’ ಎಂದರು.
►‘ನನ್ನ ಕುಟುಂಬದ ಜೀವಕ್ಕೂ ಅಪಾಯವಿದೆ’
ಇಸ್ರೇಲ್ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿರುವುದರಿಂದ ತಮ್ಮ ಮತ್ತು ಕುಟುಂಬದ ಜೀವಕ್ಕೆ ಅಪಾಯವಿದೆ ಎಂದು ಅಲ್ಬನೀಸ್ ಆತಂಕ ವ್ಯಕ್ತಪಡಿಸಿದರು.
‘ನಾನು ಪ್ರಾಮಾಣಿಕವಾಗಿರಲೇಬೇಕು. ಈ ರೀತಿ ಮಾತನಾಡುವ ಮೂಲಕ ನನ್ನ ಮತ್ತು ನನ್ನ ಕುಟುಂಬದ ಜೀವವನ್ನೇ ಪಣಕ್ಕಿಡುತ್ತಿದ್ದೇನೆ. ಕನಿಷ್ಠ ಸತ್ಯವನ್ನಾದರೂ ಹೇಳಲು ನನಗೆ ಅವಕಾಶ ನೀಡಿ’ ಎಂದು ಹೇಳಿದರು.
‘ಫೆಲೆಸ್ತೀನಿನ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಇಸ್ರೇಲ್ ಏನು ಮಾಡುತ್ತಿದೆ ಎಂಬುದನ್ನು ನಾವಾದರೂ ಅರ್ಥಮಾಡಿಕೊಳ್ಳಬೇಕಲ್ಲವೇ? ಒಂದು ತಿಂಗಳ ಹಿಂದೆ ನನ್ನ ಮಕ್ಕಳು ಮಲಗಿದ್ದಾಗ ಕೆಲವರು ನನ್ನ ಮನೆಗೆ ನುಗ್ಗಿದ್ದರು. ಹೀಗಾಗಿ ಅಪಾಯವನ್ನು ಎದುರಿಸುವುದು ಎಂದರೇನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.
ಐರ್ಲೆಂಡ್ ತನ್ನ ಯುರೋಪಿಯನ್ ಒಕ್ಕೂಟದ ಅಧ್ಯಕ್ಷತೆಯನ್ನು ಬಳಸಿಕೊಂಡು ಇಸ್ರೇಲ್ ವಿರುದ್ಧ ನಿಲ್ಲಬೇಕು. ಯುರೋಪಿನ ಇತರ ರಾಷ್ಟ್ರಗಳೂ ತಮ್ಮ ಹೊಣೆಗಾರಿಕೆಯನ್ನು ಅರಿತು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಅಂತರರಾಷ್ಟ್ರೀಯ ಕಾನೂನಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಐರ್ಲೆಂಡ್ ಗೆ ಯುರೋಪಿನ ಒಕ್ಕೂಟದ ಅಧ್ಯಕ್ಷತೆ ಐತಿಹಾಸಿಕ ಅವಕಾಶವಾಗಿದೆ. ಯುದ್ಧ, ಶೋಷಣೆ, ದಬ್ಬಾಳಿಕೆ ಮತ್ತು ದಮನದ ವಿರುದ್ಧ ತತ್ವಬದ್ಧ ನಾಯಕತ್ವ ಪ್ರದರ್ಶಿಸಬೇಕು. ಪರಿಸರ ಮತ್ತು ಎಲ್ಲ ಜೀವಿಗಳ ರಕ್ಷಣೆಯ ಬಗ್ಗೆಯೂ ಬದ್ಧತೆ ತೋರಬೇಕು ಎಂದು ರಾಜಕಾರಣಿಗಳಿಗೆ ತಿಳಿಸಿದರು.
►ಕದನ ವಿರಾಮದ ನಡುವೆಯೂ ಗಾಝಾದಲ್ಲಿ ನರಮೇಧ ಮುಂದುವರಿಕೆ
ಕದನ ವಿರಾಮ ಘೋಷಣೆಯಾಗಿದ್ದರೂ ಗಾಝಾದಲ್ಲಿ ನರಮೇಧ ಮುಂದುವರಿದಿದೆ ಎಂದು ಅಲ್ಬನೀಸ್ ಆರೋಪಿಸಿದರು.
‘ಗಾಝಾದ ಜನಸಂಖ್ಯೆಯನ್ನು ನಾಶಗೊಂಡಿರುವ ಭೂಪ್ರದೇಶದ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಲಾಗಿದೆ. ಇಸ್ರೇಲ್ ತನ್ನ ನಿಯಂತ್ರಣದಲ್ಲಿರುವ ಪ್ರದೇಶವನ್ನು ನಿರಂತರವಾಗಿ ವಿಸ್ತರಿಸುತ್ತಿದೆ’ ಎಂದರು.
ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ 21,700 ಮಕ್ಕಳು ಸೇರಿದಂತೆ 74,500ಕ್ಕೂ ಹೆಚ್ಚು ಫೆಲೆಸ್ತೀನಿಯರು ಹತ್ಯೆಯಾಗಿದ್ದಾರೆ. 1,095 ದಿನಗಳ ಅವಧಿಯಲ್ಲಿ ಪ್ರತಿದಿನ ಸರಾಸರಿ 20 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.
ಗಾಝಾ ಸಂಪೂರ್ಣ ಅವಶೇಷಗಳಾಗಿ ಮಾರ್ಪಟ್ಟಿದೆ. ಕುಟುಂಬಗಳು ಕಟ್ಟಡಗಳ ಅವಶೇಷಗಳು ಮತ್ತು ಮಾನವ ದೇಹಗಳ ಅವಶೇಷಗಳ ನಡುವೆ ಬದುಕುವಂತಾಗಿದೆ. ಕೀಟಗಳು, ಇಲಿಗಳು ಮತ್ತು ರೋಗಗಳ ಹಾವಳಿಯೂ ಜನರನ್ನು ಕಾಡುತ್ತಿದೆ. ಇದರ ನಡುವೆಯೂ ಇಸ್ರೇಲಿ ದಾಳಿಗಳು ಮತ್ತು ಮಾನವೀಯ ನೆರವು ತಲುಪುವುದಕ್ಕೆ ವಿಧಿಸಿರುವ ನಿರ್ಬಂಧಗಳು ಮುಂದುವರಿದಿವೆ. ಚಳಿಗಾಲ ಸಮೀಪಿಸುತ್ತಿರುವುದರಿಂದ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಶಾಂತಿ ಮಂಡಳಿಯಂತಹ ಸಂಸ್ಥೆಗಳ ಮೂಲಕ ಫೆಲೆಸ್ತೀನ್ ನಲ್ಲಿ ಹೊರಗಿನಿಂದ ಆಡಳಿತ ವ್ಯವಸ್ಥೆ ಹೇರಲು ನಡೆಸುತ್ತಿರುವ ಪ್ರಯತ್ನಗಳನ್ನೂ ಅವರು ವಿರೋಧಿಸಿದರು. ಇಂತಹ ವ್ಯವಸ್ಥೆಗಳು ಫೆಲೆಸ್ತೀನಿನ ಜನರ ಸ್ವಯಂ ನಿರ್ಣಯದ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತವೆ ಎಂದು ಎಚ್ಚರಿಸಿದರು.
►‘ಶಕ್ತಿಶಾಲಿಗಳದ್ದೇ ನ್ಯಾಯವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’
ತಮ್ಮ ಐರ್ಲೆಂಡ್ ಭೇಟಿ ನಿರ್ಣಾಯಕ ಸಂದರ್ಭದಲ್ಲಿ ನಡೆಯುತ್ತಿದೆ ಎಂದು ಹೇಳಿದ ಅಲ್ಬನೀಸ್, ಕಳೆದ ಮೂರು ವರ್ಷಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ದುರ್ಬಲಗೊಳಿಸಲು ಅವಕಾಶ ನೀಡಲಾಗಿದೆ ಎಂದು ಟೀಕಿಸಿದರು.
‘ಕಾನೂನಿನ ಆಳ್ವಿಕೆಯ ಬದಲಿಗೆ ಕಾನೂನುಬಾಹಿರತೆಯ ಆಳ್ವಿಕೆಯನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಪ್ರಬಲ ಹಿತಾಸಕ್ತಿಗಳ ಬೆಂಬಲದಿಂದ ಇಂತಹ ಬೆಳವಣಿಗೆಗಳು ನಡೆಯುತ್ತಿವೆ. ಬಲವೇ ನ್ಯಾಯವನ್ನು ನಿರ್ಧರಿಸುವ ಜಗತ್ತನ್ನು ನಿರ್ಮಿಸಲಾಗುತ್ತಿದೆ’ ಎಂದರು.
ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯನ್ನು ಕಾಪಾಡಬೇಕಾದರೆ ಯುರೋಪಿಯನ್ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳು ತಮ್ಮ ನಿಲುವಿನಲ್ಲಿ ನಿರ್ಣಾಯಕ ಬದಲಾವಣೆ ಮಾಡಿಕೊಳ್ಳಬೇಕು. ಇಸ್ರೇಲ್ ನೊಂದಿಗಿನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಮುಂದುವರಿಸುವುದರಿಂದ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲಿ ಭಾಗಿಯಾದಂತಾಗುವ ಅಪಾಯವಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅಲ್ಬನೀಸ್ ಆಗ್ರಹಿಸಿದರು.






