6 ವರ್ಷದ ಹಿಂದೆ ಸ್ಪೇನ್ ನಲ್ಲಿ ನಾಪತ್ತೆಯಾಗಿದ್ದ ಬ್ರಿಟನ್ ನ ಯುವಕ ಫ್ರಾನ್ಸ್ ನಲ್ಲಿ ಪತ್ತೆ

Photo: bbc.com
ಪ್ಯಾರಿಸ್: ಆರು ವರ್ಷದ ಹಿಂದೆ ಸ್ಪೇನ್ ನಲ್ಲಿ ಕುಟುಂಬದ ಜತೆ ಪ್ರವಾಸಕ್ಕೆ ಬಂದ ಸಂದರ್ಭ ನಾಪತ್ತೆಯಾಗಿದ್ದ ಬ್ರಿಟನ್ನಿನ ಯುವಕ ಗುರುವಾರ ನೈಋತ್ಯ ಫ್ರಾನ್ಸ್ ನಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
2017ರಲ್ಲಿ ತಾಯಿ ಮತ್ತು ಅಜ್ಜನ ಜತೆ ಸ್ಪೇನ್ ಗೆ ಪ್ರವಾಸ ತೆರಳಿದ್ದಾಗ ಅಲೆಕ್ಸ್ ಬ್ಯಾಟಿ(ಈಗ 17 ವರ್ಷ) ನಾಪತ್ತೆಯಾಗಿದ್ದ. ಇವರಿಬ್ಬರು ಬಾಲಕನ ಪಾಲಕ ರಕ್ಷಕರಾಗಿರಲಿಲ್ಲ ಮತ್ತು ಬ್ಯಾಟಿ ನಾಪತ್ತೆ ಪ್ರಕರಣದಲ್ಲಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಗುರುವಾರ ಬ್ಯಾಟಿ ನೈಋತ್ಯ ಫ್ರಾನ್ಸ್ ನ ಪಿರೆನೀಸ್ ನಗರದಲ್ಲಿ ರಸ್ತೆಯ ಬದಿ ನಡೆದುಕೊಂಡು ಬರುತ್ತಿದ್ದಾಗ ವ್ಯಾನ್ ಚಾಲಕನೊಬ್ಬ ಗಮನಿಸಿ ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ. ಕಳೆದ ಕೆಲ ದಿನಗಳಿಂದ ನಡೆಯುತ್ತಲೇ ಇರುವುದಾಗಿ ಬ್ಯಾಟಿ ಹೇಳಿದ್ದು ಆತನ ಹೆಸರನ್ನು ಇಂಟರ್ನೆಟ್ ನಲ್ಲಿ ಹುಡುಕಿದಾಗ ಆತ ನಾಪತ್ತೆಯಾಗಿರುವ ಬಗ್ಗೆ ತಿಳಿಯಿತು. ಬಳಿಕ ಚಾಲಕನ ಫೇಸ್ಬುಕ್ ಖಾತೆಯ ಮೂಲಕ ಬ್ಯಾಟಿ ಬ್ರಿಟನ್ನಲ್ಲಿರುವ ತನ್ನ ಅಜ್ಜಿ ಮತ್ತು ದತ್ತು ಪೋಷಕಿ ಸುಸಾನ್ರನ್ನು ಸಂಪರ್ಕಿಸಿದ್ದಾನೆ ಎಂದು ವರದಿಯಾಗಿದೆ.
ಅಲೆಕ್ಸ್ ನನ್ನು ಆತನ ತಾಯಿ ಮೊರಕ್ಕೋದ ಧಾರ್ಮಿಕ ಸಮುದಾಯಕ್ಕೆ ಸೇರ್ಪಡೆಗೊಳಿಸಲು ಕರೆದೊಯ್ದಿದ್ದಾರೆ ಎಂದು ತಾನು ಭಾವಿಸಿದ್ದೆ ಎಂದು ಸುಸಾನ್ ಹೇಳಿದ್ದಾರೆ. ಇದೀಗ ತಲೆಮರೆಸಿಕೊಂಡಿರುವ ಅಲೆಕ್ಸ್ ನ ತಾಯಿ ಮತ್ತು ಅಜ್ಜನ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಿಬಿಸಿ ವರದಿ ಹೇಳಿದೆ.





