ರಶ್ಯಾದ ಪ್ರಾಂತದ ಮೇಲೆ ದಾಳಿಯಾದರೆ ಎಲ್ಲಾ ರೀತಿಯ ಆಯುಧಗಳನ್ನು ಬಳಸಲಾಗುವುದು: ಯುರೋಪ್ ಗೆ ಪುಟಿನ್ ಎಚ್ಚರಿಕೆ

ವ್ಲಾಡಿಮಿರ್ ಪುಟಿನ್ | Photo Credit : PTI
ಮಾಸ್ಕೊ, ಅ. 2: ರಶ್ಯಾ ಯುರೋಪಿಯನ್ ದೇಶಗಳ ಮೇಲೆ ದಾಳಿ ಮಾಡಲು ಯೋಜಿಸುತ್ತಿಲ್ಲ, ಆದರೆ ಯಾವುದೇ ದುರಾಕ್ರಮಣ ನಡೆದರೆ ತನ್ನ ಶಸ್ತ್ರಾಗಾರದಲ್ಲಿರುವ ಎಲ್ಲಾ ಆಯುಧಗಳನ್ನು ಬಳಸಿ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಎಚ್ಚರಿಸಿದ್ದಾರೆ.
ಮುಂಬರುವ ವರ್ಷಗಳಲ್ಲಿ ಮಾಸ್ಕೊ ಜೊತೆ ಯುದ್ಧಕ್ಕೆ ಸಿದ್ಧರಾಗುವ ಬಗ್ಗೆ ಮಾತನಾಡುವ ಮೂಲಕ, ಬಾಲ್ಟಿಕ್ ಸಮುದ್ರದಲ್ಲಿ ಮಿಲಿಟರಿ ಸಮರಾಭ್ಯಾಸಗಳನ್ನು ನಡೆಸುವ ಮೂಲಕ ಮತ್ತು ರಶ್ಯದ ಹಡಗುಗಳನ್ನು ವಶಪಡಿಸಿಕೊಳ್ಳುವ ಮೂಲಕ ಪಾಶ್ಚಿಮಾತ್ಯ ದೇಶಗಳು ಹಾಗೂ ಯುರೋಪ್ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿವೆ ಎಂದು ಪುಟಿನ್ ಆರೋಪಿಸಿದರು.
NATO ದೇಶಗಳ ಪೈಕಿ ಯಾವುದಾದರೂ ಸದಸ್ಯ ರಾಷ್ಟ್ರವು ರಶ್ಯದ ಬಾಲ್ಟಿಕ್ ಹೊರಪ್ರದೇಶವಾದ ಕಲಿಲಿನ್ಗ್ರಾಡ್ ಅನ್ನು ರಶ್ಯದಿಂದ ಪ್ರತ್ಯೇಕಿಸಲು ಅಥವಾ ಸಂಪರ್ಕ ಕಡಿತಗೊಳಿಸಲು ಯತ್ನಿಸಿದರೆ, ಅದರ ರಕ್ಷಣೆಗೆ ಅಣ್ವಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಮಾಸ್ಕೋ ನೀಡಿರುವ ಎಚ್ಚರಿಕೆಯ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ.




