ಖಾಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತದ ಕೈವಾಡ ಆರೋಪ
ಕೆನಡಕ್ಕೆ ಮಾಹಿತಿ ನೀಡಿದ್ದು ‘ಫೈವ್ಐಸ್’ ಗುಪ್ತಚರ ಜಾಲ ► ಅಮೆರಿಕ ಅಧಿಕಾರಿಯಿಂದ ಬಹಿರಂಗ

Hardeep Singh Nijjar| Photo:indiatoday.in
ವಾಶಿಂಗ್ಟನ್: ಅಮೆರಿಕ, ಬ್ರಿಟನ್ ಸೇರಿದಂತೆ ಐದು ರಾಷ್ಟ್ರಗಳ ಬೇಹುಗಾರಿಕಾ ಮೈತ್ರಿಜಾಲವಾದ ‘ಫೈವ್ ಅಯಿಸ್’ ನೀಡಿದ ಗುಪ್ತಚರ ಮಾಹಿತಿಯೊಂದು, ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, ಕೆನಡದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳ ಕೈವಾಡವಿದೆಯೆಂದು ಆರೋಪಿಸಲು ಪ್ರೆರೇಪಿಸಿತೆಂದು ಮಾಧ್ಯಮ ವರದಿಯೊಂದು ಶನಿವಾರ ಬಹಿರಂಗಪಡಿಸಿದೆ.
ಫೈವ್ ಐಸ್ ಜಾಲವು ತನ್ನ ಪಾಲುದಾರ ದೇಶಗಳ ನಡುವೆ ಹಂಚಿಕೊಂಡ ಗುಪ್ತಚರ ಮಾಹಿತಿಯನ್ನು ಆಧರಿಸಿ ಕೆನಡದ ಪ್ರಜೆ (ಖಾಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್)ಯ ಹತ್ಯೆ ಪ್ರಕರಣ ಹಾಗೂ ಭಾರತ ಸರಕಾರದ ನಡುವೆ ಸಂಭಾವ್ಯ ನಂಟಿದೆಯೆಂಬ ಆರೋಪವನ್ನು ಟ್ರುಡೋ ಮಾಡಿದ್ದಾರೆಂದು ಕೆನಡದಲ್ಲಿನ ಅಮೆರಿಕ ರಾಯಭಾರಿ ಡೇವಿಡ್ ಕೊಹೆನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕೆನಡದ ಸಿಟಿವಿ ಸುದ್ದಿವಾಹಿನಿ ಶನಿವಾರ ವರದಿ ಮಾಡಿದೆ.
ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೈವ್ ಐಸ್ನ ಪಾಲುದಾರ ದೇಶಗಳು ಕೆನಡದ ಜೊತೆಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ಅಮೆರಿಕದ ಅಧಿಕಾರಿಯೊಬ್ಬರು ಒಪ್ಪಿಕೊಂಡಿರುವುದು ಇದೇ ಮೊದಲ ಸಲವಾಗಿದೆ.
“ಫೈವ್ ಐಸ್ ನೆಟ್ವರ್ಕ್ ಎಂಬುದು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಕೆನಡ ಹಾಗೂ ನ್ಯೂಝಿಲ್ಯಾಂಡ್ ದೇಶಗಳನ್ನು ಒಳಗೊಂಡ ಬೇಹುಗಾರಿಕಾ ಮೈತ್ರಿಕೂಟವಾಗಿದೆ. ಕಣ್ಗಾವಲು ನಡೆಸುವುದು ಹಾಗೂ ಸಿಗ್ನಲ್ಗಳನ್ನು ವಿಶ್ಲೇಷಿಸುವಂತಹ ಬೇಹುಗಾರಿಕಾ ಜಾಲವಾಗಿದೆ.
ಕೆನಡದ ಪ್ರಜೆ ಹರದೀಪ್ ಸಿಂಗ್ ನಿಜ್ಜಾರ್ನ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳು ಶಾಮೀಲಾಗಿರುವ ಸಾಧ್ಯತೆಯಿರುವುದಾಗಿ ಜಸ್ಟಿನ್ ಟ್ರುಡೋ ಅವರು ಸೆಪ್ಟೆಂಬರ್ 18ರಂದು ಆಪಾದಿಸಿದ್ದರು.
ಖಾಲಿಸ್ತಾನಿ ಭಯೋತ್ಪಾದಕನೆಂದು ಗುರುತಿಸಲಾದ ಹರದೀಪ್ ಸಿಂಗ್ ನಿಜ್ಜರ್ನನ್ನು ಜೂನ್ 18ರಂದು ಕೆನಡದ ಬ್ರಿಟಿಶ್ ಕೊಲಂಬಿಯಾ ರಾಜ್ಯದ ಸರ್ರೆ ಎಂಬಲ್ಲಿ ಗುಂಡೇಟಿನಿಂದಾಗಿ ಸಾವನ್ನಪ್ಪಿದ್ದನು.
ಟ್ರುಡೋ ಅವರ ಆರೋಪಗಳನ್ನು ಭಾರತವು ತಳ್ಳಿಹಾಕಿತ್ತು. ಕೆನಡದ ಪ್ರಧಾನಿಯ ಹೇಳಿಕೆಗಳು ‘ಅಸಂಬದ್ಧ’ ಹಾಗೂ ‘ ಪ್ರೇರಿತವಾದುದು’ ಎಂದು ಅದು ಹೇಳಿತ್ತು. ಈ ವಿಷಯವಾಗಿ ಕೆನಡದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರನ್ನು ಕೆನಡ ಸರಕಾರ ಉಚ್ಚಾಟಿಸಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಭಾರತ ಕೂಡಾ ಹಿರಿಯ ಕೆನಡಿಯನ್ ರಾಜತಾಂತ್ರಿಕರೊಬ್ಬರನ್ನು ಉಚ್ಚಾಟಿಸಿತ್ತು.
ಕೆನಡದ ಪ್ರಜೆ 45 ವರ್ಷದ ನಿಜ್ಜಾರ್ನನ್ನು ಭಾರತವು 2020ರಲ್ಲಿ ಉಗ್ರನೆಂದು ಘೋಷಿಸಿತ್ತು.







