ಇರಾನ್ನ `ಮಹಾನ್ ಏರ್' ಗೆ ಬೆಂಬಲ ಆರೋಪ : ಭಾರತ, ಚೀನಾ, ರಶ್ಯದ ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಮಹಾನ್ ಏರ್ | Photo Credit : Mahan Air
ವಾಶಿಂಗ್ಟನ್, ಜು.31: ಇರಾನ್ನ ವಿಮಾನ ಯಾನ ಸಂಸ್ಥೆ`ಮಹಾನ್ ಏರ್' ಮತ್ತು ಆ ಮೂಲಕ ಇರಾನ್ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ)ಗೆ ಬೆಂಬಲ ನೀಡಿದ ಆರೋಪದ ಮೇಲೆ, ಭಾರತ ಮೂಲದ `ಸ್ಕೈಸ್ ಟ್ರಾವೆಲ್ಸ್ ಅಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್' ಸೇರಿದಂತೆ ಆರು ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ಅಮೆರಿಕ ಗುರುವಾರ ನಿರ್ಬಂಧಗಳನ್ನು ಹೇರಿದೆ.
ಮಹಾನ್ ಏರ್ ಸಂಸ್ಥೆಗೆ `ಜನರಲ್ ಸೇಲ್ಸ್ ಏಜೆಂಟ್'ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಗಳ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿಯನ್ನು ಸಾಗಿಸಲು, ಮಿಲಿಟರಿ ತರಬೇತಿಗೆ ನೆರವಾಗಲು ಮತ್ತು ಡ್ರೋನ್ ವ್ಯವಸ್ಥೆಗಳು ಹಾಗೂ ಆಯುಧಗಳ ಸಾಗಾಟಕ್ಕೆ ಸಹಾಯ ಮಾಡುವ ಮೂಲಕ `ಮಹಾನ್ ಏರ್' ಸಂಸ್ಥೆಯು ಐಆರ್ಜಿಸಿಗೆ ದೀರ್ಘಕಾಲದಿಂದ ನೆರವಾಗುತ್ತಿದೆ ಎಂದು ಅಮೆರಿಕದ ಖಜಾನೆ ಇಲಾಖೆ ಆರೋಪಿಸಿದೆ.
ಶ್ರೀನಗರ ಮತ್ತು ದಿಲ್ಲಿಯಲ್ಲಿ ಕಚೇರಿಗಳನ್ನು ಹೊಂದಿರುವ ಸ್ಕೈಸ್ ಟ್ರಾವೆಲ್ಸ್ ಸಂಸ್ಥೆ, ಚೀನಾ ಮೂಲದ `ಶಾಂಗೈ ವಿಂಗ್ಸ್ ಇಂಟನ್ರ್ಯಾಷನಲ್ ಲಾಜಿಸ್ಟಿಕ್ಸ್ ಕಂಪೆನಿ' ಮತ್ತು `ಶಾಂಗೈ ಎಲೈಟ್ ಇಂಟರ್ನ್ಯಾಷನಲ್ ಟ್ರಾವೆಲ್ ಕಂಪೆನಿ', ರಶ್ಯಾ ಮೂಲದ `ಏರ್ ಕಾರ್ಗೋ ಪ್ರೋ ಲಿಮಿಟೆಡ್', ಶಾಂಗೈ ವಿಂಗ್ಸ್ನ ವ್ಯವಸ್ಥಾಪಕ ನಿರ್ದೇಶಕ ಟ್ಯಾಂಗ್ ಕ್ಸಿನ್ ಅವರನ್ನು ಈ ನಿರ್ಬಂಧಗಳು ಗುರಿಯಾಗಿಸಿಕೊಂಡಿವೆ.
ಇರಾನ್ ಮಿಲಿಟರಿ ದಾಳಿಯ ಗುರಿ ನಿಗದಿಗೆ ಬೆಂಬಲ ನೀಡಲು ಅಮೆರಿಕ ಮತ್ತು ಇಸ್ರೇಲಿ ಉಪಕರಣಗಳ ಸ್ಥಳಗಳ ಮಾಹಿತಿಯನ್ನು ಪಡೆದುಕೊಂಡಿರುವ ಟೆಹರಾನ್ ಮೂಲದ `ದಾದೇನೆಗಾರ್' ಕಂಪೆನಿಯನ್ನು ಸಹ ನಿರ್ಬಂಧಿಸಲಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ಹೇಳಿದೆ.






