ಮಿಯಾಮಿ ವಿಮಾನ ನಿಲ್ದಾಣದಲ್ಲಿ Amazon ಕಾರ್ಗೋ ವಿಮಾನ ಅಪಘಾತ: ಐವರು ಮೃತ್ಯು

Screengrab : X
ಮಿಯಾಮಿ: Amazon Prime Airಗೆ ಸೇರಿದ ಕಾರ್ಗೋ ವಿಮಾನವೊಂದು ಭಾನುವಾರ ಅಮೆರಿಕದ ಫ್ಲೋರಿಡಾದ ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಯಿತು. ವಿಮಾನ ಇಳಿಯುವಾಗ ರನ್ ವೇ ದಾಟಿ, ನೆಲದಲ್ಲಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
‘Prime Air Flight 7598’ ವಿಮಾನವು ಪ್ಯುರ್ಟೊ ರಿಕೊದ ಸ್ಯಾನ್ ಜುವಾನ್ ನಿಂದ ಮಿಯಾಮಿಗೆ ಬರುತ್ತಿತ್ತು. ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಸ್ವಲ್ಪ ಮುನ್ನ ವಿಮಾನ ನಿಲ್ದಾಣದ ರನ್ವೇ ದಾಟಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿಮಾನ ಡಿಕ್ಕಿ ಹೊಡೆದ ವಾಹನಗಳಲ್ಲಿ ಕನಿಷ್ಠ ಇಬ್ಬರು ಸಿಲುಕಿಕೊಂಡಿದ್ದರು. ವಿಮಾನದೊಳಗೆ ಪೈಲಟ್ ಮತ್ತು ಸಹ ಪೈಲಟ್ ಕೂಡ ಸಿಲುಕಿಕೊಂಡಿದ್ದರು ಎಂದು ಮಿಯಾಮಿ-ಡೇಡ್ ಅಗ್ನಿಶಾಮಕ ಮುಖ್ಯಸ್ಥ ರೇ ಜಡಲ್ಲಾ ತಿಳಿಸಿದ್ದಾರೆ.
ಅಪಘಾತದ ಬಳಿಕ ವಿಮಾನದಿಂದ ಇಂಧನ ಸೋರಿಕೆಯಾಗುತ್ತಿತ್ತು. ತುರ್ತು ಸಿಬ್ಬಂದಿ ಸೋರಿಕೆಯನ್ನು ನಿಯಂತ್ರಿಸುವ ಕಾರ್ಯ ನಡೆಸಿದರು.
ಘಟನಾ ಸ್ಥಳಕ್ಕೆ 60ಕ್ಕೂ ಹೆಚ್ಚು ಅಗ್ನಿಶಾಮಕ ಘಟಕಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿ ಧಾವಿಸಿದ್ದರು. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಜ್ವಾಲೆ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರ ಜತೆಗೆ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ನಡೆಸಿದರು.
ಸ್ಥಳೀಯ ಕಾಲಮಾನ ಮಧ್ಯಾಹ್ನ 1.55ಕ್ಕೆ ರನ್ ವೇ ದಾಟಿ ಹಲವು ವಾಹನಗಳಿಗೆ ವಿಮಾನ ಡಿಕ್ಕಿ ಹೊಡೆದಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿತ್ತು. ಘಟನಾ ಸ್ಥಳದಲ್ಲಿ ಹಲವು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
32 ವರ್ಷ ಹಳೆಯ ಬೋಯಿಂಗ್ ವಿಮಾನ
ಅಪಘಾತಕ್ಕೀಡಾದ ವಿಮಾನ ಬೋಯಿಂಗ್ 767-300 ಮಾದರಿಯದು. ಇದು 32 ವರ್ಷ ಹಳೆಯ ವಿಮಾನ. 1994ರಿಂದ 2015ರವರೆಗೆ ವಿವಿಧ ವಿಮಾನಯಾನ ಸಂಸ್ಥೆಗಳು ಇದನ್ನು ಪ್ರಯಾಣಿಕರ ವಿಮಾನವಾಗಿ ಬಳಸಿದ್ದವು. ಬಳಿಕ ಸರಕು ಸಾಗಣೆ ವಿಮಾನವಾಗಿ ಬಳಸಲಾಗುತ್ತಿತ್ತು ಎಂದು ವಿಮಾನಗಳ ಸಂಚಾರ ಮಾಹಿತಿ ನೀಡುವ FlightRadar24 ತಿಳಿಸಿದೆ.
Amazonಗಾಗಿ 21 Air ಸಂಸ್ಥೆ ಈ ವಿಮಾನವನ್ನು ನಿರ್ವಹಿಸುತ್ತಿತ್ತು. ‘ಮಿಯಾಮಿಯಲ್ಲಿ ನಮ್ಮ ವಿಮಾನವೊಂದಕ್ಕೆ ಸಂಬಂಧಿಸಿದ ಅಪಘಾತದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಮೃತಪಟ್ಟವರ ಕುಟುಂಬಗಳು ಮತ್ತು ಆತ್ಮೀಯರಿಗೆ ನಮ್ಮ ಆಳವಾದ ಸಂತಾಪಗಳು’ ಎಂದು 21 Air ತನ್ನ ವೆಬ್ಸೈಟ್ ನಲ್ಲಿ ತಿಳಿಸಿದೆ.
ವಿಮಾನವು ರನ್ ವೇಯಿಂದ ಹೊರಹೋಗುವಾಗ 112 ನಾಟ್ಸ್ ವೇಗದಲ್ಲಿ ಚಲಿಸುತ್ತಿತ್ತು ಎಂದು FlightRadar24 ತಿಳಿಸಿದೆ. ಇದು ಗಂಟೆಗೆ ಸುಮಾರು 129 ಮೈಲಿ (207 ಕಿ.ಮೀ.) ವೇಗಕ್ಕೆ ಸಮನಾಗಿದೆ.
ಅಪಘಾತದ ಬಳಿಕ ವಿಮಾನ ನಿಲ್ದಾಣದ ಹೊರಗಿನ ರಸ್ತೆಯಲ್ಲಿ ವಿಮಾನವು ಪಕ್ಕಕ್ಕೆ ಬಿದ್ದಿರುವ ದೃಶ್ಯಗಳು ಕಂಡುಬಂದವು. ವಿಮಾನದ ಅವಶೇಷಗಳಿಂದ ದಟ್ಟ ಕಪ್ಪು ಹೊಗೆ ಏರುತ್ತಿರುವ ದೃಶ್ಯಗಳೂ ಕಾಣಿಸಿಕೊಂಡವು.
ತನಿಖೆ ಆರಂಭ
ಅಮೆರಿಕದ ನಾಗರಿಕ ವಿಮಾನ ಅಪಘಾತಗಳ ತನಿಖೆ ನಡೆಸುವ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಆರಂಭಿಸಿದೆ. NTSB ಅಧ್ಯಕ್ಷೆ ಜೆನ್ನಿಫರ್ ಹೋಮೆಂಡಿ ನೇತೃತ್ವದ ತಂಡವನ್ನು ತನಿಖೆಗಾಗಿ ಮಿಯಾಮಿಗೆ ಕಳುಹಿಸಲಾಗಿದೆ. ತಂಡ ಸೋಮವಾರ ಮಿಯಾಮಿಯಲ್ಲಿ ಮಾಧ್ಯಮಗೋಷ್ಠಿ ನಡೆಸುವ ನಿರೀಕ್ಷೆಯಿದೆ.
ಅಪಘಾತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು Amazon ವಕ್ತಾರೆ ಕೆಲ್ಲಿ ನಾಂಟೆಲ್ ತಿಳಿಸಿದ್ದಾರೆ. ಕಂಪನಿಯು ಘಟನೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಅಪಘಾತದ ಸಂದರ್ಭಗಳನ್ನು ತಿಳಿಯಲು ಸ್ಥಳೀಯ ಅಧಿಕಾರಿಗಳು ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅಪಘಾತದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಸುರಕ್ಷತೆ, ಯೋಗಕ್ಷೇಮ ಮತ್ತು ಕಾಳಜಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Boeing ಮತ್ತು 21 Air ಕೂಡ ಸರ್ಕಾರಿ ತನಿಖೆಗೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ತಿಳಿಸಿವೆ.






