ಡೊನಾಲ್ಡ್ ಟ್ರಂಪ್ ಗೆ ಫಿಫಾ ಶಾಂತಿ ಪ್ರಶಸ್ತಿ ಪ್ರದಾನ

PC: x.com/RudyGiulian
ವಾಷಿಂಗ್ಟನ್: ಫಿಫಾ ಅಧ್ಯಕ್ಷ ಜೈನಿ ಇನ್ಫಾಂಟಿನೊ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಫಿಫಾ ಶಾಂತಿ ಪ್ರಶಸ್ತಿಯನ್ನು ಪ್ರದಾನಿಸುವ ಮೂಲಕ ಫಿಫಾ ವಿಶ್ವಕಪ್-2026 ರ ಪಂದ್ಯಗಳ ಡ್ರಾ ಸಮಾರಂಭ ಅನಿರೀಕ್ಷಿತ ರಾಜಕೀಯ ಲೇಪ ಪಡೆಯಿತು. ವಾಷಿಂಗ್ಟನ್ ಡಿಸಿಯ ಕೆನಡಿ ಸೆಂಟರ್ ನಲ್ಲಿ ಈ ಸಮಾರಂಭ ನಡೆಯಿತು. ಇದು ಫಿಫಾದಿಂದ ನೀಡುವ ಮೊಟ್ಟಮೊದಲ ಶಾಂತಿ ಪ್ರಶಸ್ತಿಯಾಗಿದ್ದು, "ಶಾಂತಿಗಾಗಿ ವಿಶೇಷ ಮತ್ತು ಅದ್ಭುತ ಕ್ರಮಗಳನ್ನು ಕೈಗೊಂಡ ವ್ಯಕ್ತಿಗಳನ್ನು ಗುರುತಿಸುವ" ಮತ್ತು ವಿಶ್ವದ ಜನರನ್ನ ಒಗ್ಗೂಡಿಸುವ ಈ ಗೌರವವನ್ನು ಈ ವರ್ಷದಿಂದ ಆರಂಭಿಸಲಾಗುತ್ತಿದೆ ಎಂದು ಫಿಫಾ ಪ್ರಕಟಿಸಿದೆ.
ಜಾಗತಿಕವಾಗಿ ಪ್ರಸಾರ ಮಾಡಲಾದ ಮತ್ತು ಮೊದಲೇ ಚಿತ್ರೀಕರಿಸಿದ ವಿಡಿಯೊ ಮಾಂಟೇಜ್ ನ ಭಾಗವಾಗಿಈ ಪ್ರಶಸ್ತಿ ಘೋಷಿಸಲಾಯಿತು. ವಿಡಿಯೊ ಮಾಂಟೇಜ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಬಿಂಬಿಸಲಾಗಿದ್ದು, ಇದರ ಜತೆಗೆ ರಾಜತಾಂತ್ರಿಕತೆಯನ್ನು ಚರ್ಚಿಸುತ್ತಿರುವ ಟ್ರಂಪ್ ಅವರ ವಿಡಿಯೊ ತುಣುಕು ಕೂಡಾ ಸೇರಿದೆ. ಶಾಂತಿ ಒಪ್ಪಂದದ ಮಧ್ಯಸ್ಥಿಕೆದಾರ ಮತ್ತು ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಿದ ಮುಖಂಡ ಎಂದು ಟ್ರಂಪ್ ಅವರನ್ನು ನಿರೂಪಕರು ಬಣ್ಣಿಸಿದರು. ಟ್ರಂಪ್ ಆಡಳಿತ ವಿಶ್ವಾದ್ಯಂತ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಪ್ರಯತ್ನ ಮಾಡಿದೆ ಎಂದು ವ್ಯಾಖ್ಯಾನಿಸಲಾಯಿತು.
"ಇದು ನಿಜಕ್ಕೂ ನನ್ನ ಜೀವನದಲ್ಲಿ ದೊಡ್ಡ ಗೌರವ. ಪ್ರಶಸ್ತಿಗಿಂತ ಹೆಚ್ಚಾಗಿ, ಲಕ್ಷಾಂತರ ಜನರನ್ನು ಹಾಗೂ ಲಕ್ಷಾಂತರ ಜನರ ಬದುಕನ್ನು ನಾವು ರಕ್ಷಿಸಿದ್ದೇವೆ. ಉದಾಹರಣೆಗೆ ಕಾಂಗೊ, ಇಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಜನ ಹತ್ಯೆಗೀಡಾಗಿದ್ದಾರೆ. ಮತ್ತೆ ಒಂದು ಕೋಟಿ ಮಂದಿಯ ಜೀವಹಾನಿ ಸದ್ಯದಲ್ಲೇ ಆಗುತ್ತಿತ್ತು. ನಾವು ಮಧ್ಯಸ್ಥಿಕೆ ವಹಿಸಿ ಇದನ್ನು ತಪ್ಪಿಸಿದ ಬಗ್ಗೆ ಹೆಮ್ಮೆ ಇದೆ. ಭಾರತ- ಪಾಕಿಸ್ತಾನ ಕೂಡಾ; ಇದರ ಜತೆಗೆ ಹಲವು ಸಂಘರ್ಷಗಳನ್ನು ಕೊನೆಗೊಳಿಸುವುದು ಸಾಧ್ಯವಾಯಿತು. ಕೆಲವೊಂದು ಪ್ರಕರಣಗಳು ಆರಂಭವಾಗುವ ಮುನ್ನವೇ ಕೊನೆಗೊಳಿಸಲಾಯಿತು" ಎಂದು ಪ್ರಶಸ್ತಿ ಸ್ವೀಕರಿಸಿದ ಟ್ರಂಪ್ ಹೇಳಿದರು.







