ಅಮೆರಿಕ: ಎಚ್-1ಬಿ ವೀಸಾ ಶುಲ್ಕ ಹೆಚ್ಚಳ

Photo: NDTV
ವಾಷಿಂಗ್ಟನ್: ಭಾರತೀಯರಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಚ್-1ಬಿ , ಎಲ್-1 ಮತ್ತು ಇಬಿ-5 ಮುಂತಾದ ವಲಸೆಯೇತರ ವರ್ಗದ ವೀಸಾಗಳ ಶುಲ್ಕದಲ್ಲಿ ಭಾರೀ ಹೆಚ್ಚಳ ಮಾಡಿರುವುದಾಗಿ ಅಮೆರಿಕ ಘೋಷಿಸಿದೆ.
2016ರ ಬಳಿಕ ನಡೆದಿರುವ ಶುಲ್ಕ ಹೆಚ್ಚಳ 2024ರ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ಎಚ್-1ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು ಇದು ಅಮೆರಿಕ ಕಂಪೆನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ತಂತ್ರಜ್ಞಾನ ಸಂಸ್ಥೆಗಳು ಪ್ರತೀ ವರ್ಷ ಸಾವಿರಾರು ಉದ್ಯೋಗಿಗಳನ್ನು ಭಾರತ, ಚೀನಾ ಮತ್ತಿತರ ದೇಶಗಳಿಂದ ನೇಮಕ ಮಾಡಿಕೊಳ್ಳಲು ಈ ವೀಸಾವನ್ನು ಬಳಸುತ್ತವೆ. ಇಬಿ-5 ವೀಸಾ ಯೋಜನೆಯಡಿ, ಅಮೆರಿಕನ್ನರಿಗೆ ಕನಿಷ್ಟ 10 ಉದ್ಯೋಗ ಸೃಷ್ಟಿಸಲು ನೆರವಾಗುವ ಕನಿಷ್ಟ 5 ಲಕ್ಷ ಡಾಲರ್ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಅಮೆರಿಕದ ವೀಸಾ ಪಡೆಯಬಹುದು.
ಎಲ್-1 ವೀಸಾವು ವಲಸೆಯೇತರ ವೀಸಾ ವರ್ಗಕ್ಕೆ ಸೇರಿದ್ದು ಬಹುರಾಷ್ಟ್ರೀಯ ಸಂಸ್ಥೆಗಳು ವಿದೇಶದಲ್ಲಿರುವ ತಮ್ಮ ಶಾಖೆಯಿಂದ ಕೆಲವು ಉದ್ಯೋಗಿಗಳನ್ನು ಅಮೆರಿಕದ ಶಾಖೆಗೆ ವರ್ಗಾಯಿಸಲು ಮತ್ತು ತಾತ್ಕಾಲಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತದೆ. ಎಪ್ರಿಲ್ 1ರಿಂದ ಎಚ್-1ಬಿ ವೀಸಾದ ಅರ್ಜಿ ಶುಲ್ಕವು (ಈಗ 1 ಡಾಲರ್ ನಿಂದ 129 ಡಾಲರ್) 460 ಡಾಲರ್ ನಿಂದ 780 ಡಾಲರ್ ಹಂತದಲ್ಲಿರುತ್ತದೆ. ಎಚ್-1ಬಿ ನೋಂದಣಿ ಶುಲ್ಕವು 215 ಡಾಲರ್ ಗೆ (ಈಗ 10 ಡಾಲರ್) ಏರಿಕೆಯಾಗಲಿದೆ, ಆದರೆ ಮುಂದಿನ ವರ್ಷದಿಂದ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.







