ಅಮೆರಿಕ: ಹೈಸ್ಕೂಲ್ನಲ್ಲಿ ಶೂಟೌಟ್ ; 4 ವಿದ್ಯಾರ್ಥಿಗಳಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ಅಟ್ಲಾಂಟಾ ನಗರದ ಹೈಸ್ಕೂಲ್ನ ಹೊರಗೆ ಫೆಬ್ರವರಿ 14ರಂದು ನಡೆದ ಗುಂಡಿನ ದಾಳಿಯಲ್ಲಿ 4 ವಿದ್ಯಾರ್ಥಿಗಳು ಗಾಯಗೊಂಡಿದ್ದು, 3 ಶಂಕಿತ ಆರೋಪಿಗಳನ್ನು ಬಂಧಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ದಿ ಯುಎಸ್ ಸನ್' ಸುದ್ಧಿಸಂಸ್ಥೆ ವರದಿ ಮಾಡಿದೆ.
ನೈಋತ್ಯ ಅಟ್ಲಾಂಟಾದ ಬೆಂಜಮಿನ್ ಇ.ಮೇಸ್ ಹೈಸ್ಕೂಲ್ನ ಹೊರಗಡೆಯ ಪಾರ್ಕಿಂಗ್ ಪ್ರದೇಶದಲ್ಲಿ ಬುಧವಾರ ಸಂಜೆ ಗುಂಡು ಹಾರಾಟದ ಘಟನೆ ನಡೆದಿದೆ. ಶಾಲೆ ಬಿಟ್ಟ ಮೇಲೆ ವಿದ್ಯಾರ್ಥಿಗಳು ವಾಹನ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಅಲ್ಲಿ ನಿಂತಿದ್ದ ವಾಹನದಲ್ಲಿದ್ದ ವ್ಯಕ್ತಿಗಳು ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. 17 ವರ್ಷದ ಮೂವರು ಬಾಲಕರು ಹಾಗೂ 18 ವರ್ಷದ ಓರ್ವ ಬಾಲಕ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಒಂದು ಗಂಟೆಯೊಳಗೆ ಮೂವರು ಶಂಕಿತರನ್ನು ಬಂಧಿಸಲಾಗಿದ್ದು ಓರ್ವ ವ್ಯಕ್ತಿ, 35 ವರ್ಷದ ಮಹಿಳೆ ಹಾಗೂ ಆಕೆಯ 17 ವರ್ಷದ ಪುತ್ರಿ ಶಂಕಿತ ಆರೋಪಿಗಳು. ಗುಂಡು ಹಾರಾಟಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ಅಟ್ಲಾಂಟಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.





