ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿಗೆ ಅಮೆರಿಕ, ಭಾರತ ಕಾರಣವಲ್ಲ: ನವಾಝ್ ಷರೀಫ್

ನವಾಝ್ ಷರೀಫ್ | Photo: PTI
ಇಸ್ಲಮಾಬಾದ್: ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಅಮೆರಿಕ ಅಥವಾ ಭಾರತವನ್ನು ದೂಷಿಸಲಾಗದು. ಆದರೆ ನಮ್ಮ ಕಾಲಿಗೆ ನಾವೇ ಗುಂಡು ಹಾರಿಸಿಕೊಂಡಿದ್ದೇವೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್, ಪರೋಕ್ಷವಾಗಿ ಮಿಲಿಟರಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
1993, 1999 ಮತ್ತು 2017ರಲ್ಲಿ ನನ್ನನ್ನು ಪದಚ್ಯುತಗೊಳಿಸಲಾಯಿತು. ಯಾಕೆಂದರೆ ಮಿಲಿಟರಿಗೆ ತನ್ನ ಕೈಗೊಂಬೆ ಪ್ರಧಾನಿಯ ಅಗತ್ಯವಿತ್ತು. ಪ್ರತೀ ಬಾರಿ ಸಂವಿಧಾನವನ್ನು ಉಲ್ಲಂಘಿಸಿ ತಮ್ಮ ಆಡಳಿತವನ್ನು ಅವರು ಹೇರುವಾಗಲೂ ನ್ಯಾಯಾಧೀಶರು ಅವರಿಗೆ ಹೂಹಾರ ಹಾಕಿ ಸ್ವಾಗತಿಸಿ ಅವರ ಆಡಳಿತವನ್ನು ಕಾನೂನುಬದ್ಧಗೊಳಿಸುತ್ತಾರೆ. ಪ್ರಧಾನಿಯ ಪದಚ್ಯುತಿ, ಸರಕಾರದ ಪದಚ್ಯುತಿಗೆ ನ್ಯಾಯಾಧೀಶರು ಮುದ್ರೆ ಒತ್ತುತ್ತಾರೆ. ನಮ್ಮ ದೇಶ ಈಗ ಎದುರಿಸುತ್ತಿರುವ ಆರ್ಥಿಕ ದುಸ್ಥಿತಿಗೆ ಅಮೆರಿಕ, ಭಾರತ ಅಥವಾ ಅಫ್ಘಾನಿಸ್ತಾನ ಕಾರಣವಲ್ಲ, ನಾವೇ ನಮ್ಮ ಕಾಲಿಗೆ ಗುಂಡು ಹಾರಿಸಿಕೊಂಡಿದ್ದೇವೆ. 2018ರಲ್ಲಿ ಚುನಾವಣೆಯಲ್ಲಿ ಅಕ್ರಮ ಎಸಗಿದ ಪಕ್ಷ ಆಡಳಿತಕ್ಕೆ ಬಂದಿತು. ಆ ಸರಕಾರವೇ ದೇಶದ ಜನತೆ ಈಗ ಅನುಭವಿಸುತ್ತಿರುವ ಸಂಕಷ್ಟ ಮತ್ತು ಆರ್ಥಿಕ ದುಸ್ಥಿತಿಗೆ ಕಾರಣ’ ಎಂದು ಷರೀಫ್ ಪ್ರತಿಪಾದಿಸಿದ್ದಾರೆ.





