ಅಮೆರಿಕ: ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ವ್ಯಕ್ತಿ ಮೃತ್ಯು

PC: facebook.com/newsmeter
ಡಲ್ಲಾಸ್ (ಅಮೆರಿಕ): ಇಲ್ಲಿನ ಪ್ಲೆಸೆಂಟ್ ಗ್ರೋವ್ ಎಂಬಲ್ಲಿ ಗ್ಯಾಸ್ಟ್ ಸ್ಟೇಷನ್ ಕನ್ವೀನಿಯೆನ್ಸ್ ಸ್ಟೋರ್ ಮೇಲೆ ಡಕಾಯಿತರು ನಡೆಸಿದ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಕ್ಯಾಷಿಯರ್ ಆಂಧ್ರಪ್ರದೇಶದ ಡಿ.ಗೋಪಿ ಕೃಷ್ಣ (32) ಮೃತಪಟ್ಟಿದ್ದಾರೆ.
ಈ ದಾಳಿಯಲ್ಲಿ ಗೋಪಿಕೃಷ್ಣ ಅವರಿಗೆ ತೀರಾ ಸನಿಹದಿಂದ ಡಕಾಯಿತರು ಗುಂಡು ಹಾರಿಸಿದ್ದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿಯುತ್ತದೆ. ಇವರು ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯ ಕರ್ಲಪಮೇಂ ಮಂಡಲದ ಯಜಲಿಯವರು. ಕ್ಯಾಷ್ ಕೌಂಟರ್ ನಲ್ಲಿದ್ದ ಗೋಪಿಕೃಷ್ಣ ಮೇಲೆ ನಡೆದ ದಾಳಿಯಲ್ಲಿ ಅವರು ತೀವ್ರ ಗಾಯಗೊಂಡಿದ್ದರು.
ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ ಗೋಪಿ, ಸೂಕ್ತ ಉದ್ಯೋಗ ಹುಡುಕಾಟಕ್ಕೆ ಅಮೆರಿಕಕ್ಕೆ ಆಗಮಿಸಿ, ಸ್ಟೋರ್ ಕೌಂಟರ್ ನಲ್ಲಿ ಉದ್ಯೋಗ ಪಡೆದಿದ್ದರು. ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.
ಗೋಪಿಕೃಷ್ಣ ಅವರಿಗೆ ಪತ್ನಿ ಮತ್ತು ಒಂದೂವರೆ ವರ್ಷದ ಮಗು ಇದ್ದು, ಉದ್ಯೋಗ ಅರಸಿ ಎಂಟು ತಿಂಗಳ ಹಿಂದೆ ಅಮೆರಿಕಕ್ಕೆ ಆಗಮಿಸಿದ್ದರು. ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಅವರ ನಿಕಟ ಸಂಬಂಧಿ ಡಿ.ಲಕ್ಷ್ಮಣ್ ಹೇಳಿದ್ದಾರೆ.
ಗೋಪಿ ಅವರ ಮೃತದೇಹವನ್ನು ಅವರ ಹುಟ್ಟೂರಿಗೆ ಬುಧವಾರ ಒಯ್ಯಲಾಗುತ್ತದೆ. ಮೃತದೇಹವನ್ನು ಹುಟ್ಟೂರಿಗೆ ಒಯ್ಯಲು ಮತ್ತು ಇತರ ವೆಚ್ಚಗಳಿಗಾಗಿ ಅವರ ಸ್ನೇಹಿತ ಶ್ರೀಕಾಂತ್ ಅವರು ನಿಧಿಸಂಗ್ರಹದಲ್ಲಿ ತೊಡಗಿದ್ದಾರೆ. "ಗೋಪಿ ಅತ್ಯಂತ ಕಾಳಜಿಯ, ಕಠಿಣ ಪರಿಶ್ರಮಿಯಾಗಿದ್ದರು. ಎಲ್ಲರ ಪ್ರೀತಿ ಸಂಪಾದಿಸಿದ್ದರು. ಸಾಕಷ್ಟು ನಿರೀಕ್ಷೆಗಳೊಂದಿಗೆ ಇಲ್ಲಿಗೆ ಆಗಮಿಸಿದ್ದರು" ಎಂದು ಶ್ರೀಕಾಂತ್ ಹೇಳಿದ್ದಾರೆ.







